Advertisement

ದೆಹಲಿಯಲ್ಲಿ ನಾಳೆ ಸಂಸದರ ಸಭೆ ಕರೆದಿರುವ ಸಿಎಂ ಎಚ್‌ಡಿಕೆ 

06:00 AM Jul 17, 2018 | Team Udayavani |

ಬೆಂಗಳೂರು: ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ರಚನೆ ವಿರುದ್ಧ ಹೋರಾಟ ಸೇರಿದಂತೆ ಮುಂದಿನ ಸಂಸತ್‌ ಅಧಿವೇಶನದಲ್ಲಿ ರಾಜ್ಯದ ಹಿತ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ದೆಹಲಿಯಲ್ಲಿ ಸಂಸದರ ಸಭೆ ಕರೆದಿದ್ದಾರೆ.

Advertisement

ಮಂಗಳವಾರ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿಗಳು ಬುಧವಾರ ಸಂಜೆ ಕರ್ನಾಟಕ ಭವನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಪ್ರತಿನಿಧಿಸುವ ರಾಜ್ಯದ ಸಂಸತ್‌ ಸದಸ್ಯರು ಮತ್ತು ಕೇಂದ್ರ ಪ್ರತಿನಿಧಿಸುವ ರಾಜ್ಯದ ಸಚಿವರೂ ಪಾಲ್ಗೊಳ್ಳಲಿದ್ದಾರೆ.

ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ರಚನೆ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ.

ಅಲ್ಲದೆ, ಕೇಂದ್ರ ಹೊರಡಿಸಿರುವ ಗೆಜೆಟ್‌ ಅಧಿಸೂಚನೆಯಲ್ಲಿ ರಾಜ್ಯಕ್ಕೆ ಮಾರಕವಾಗುವ ಕೆಲವು ಅಂಶಗಳ ಬಗ್ಗೆ ಸಂಸತ್‌ನಲ್ಲಿ ಕೇಂದ್ರದ ಗಮನ ಸೆಳೆಯುವಂತೆ ಮುಖ್ಯಮಂತ್ರಿಗಳು ಸಂಸದರನ್ನು ಮನವಿ ಮಾಡಿಕೊಳ್ಳಲಿದ್ದಾರೆ.

ಜತೆಗೆ, ಕೇಂದ್ರದಿಂದ ರಾಜ್ಯಕ್ಕೆ ಮಂಜೂರಾಗಿರುವ ಯೋಜನೆಗಳು, ಅದಕ್ಕೆ ಬಿಡುಗಡೆಯಾಗ ಬೇಕಿರುವ ಅನುದಾನಗಳ ಬಗ್ಗೆಯೂ ಕೇಂದ್ರ ಸಚಿವರ ಗಮನಕ್ಕೆ ತಂದು, ಒತ್ತಡ ಹೇರುವಂತೆ ಕೋರಲಿದ್ದಾರೆ ಎನ್ನಲಾಗಿದೆ.

Advertisement

ದೆಹಲಿಯಲ್ಲಿ ಸಿಎಂ ಕಾರ್ಯಕ್ರಮಗಳು: ಮಂಗಳವಾರ ಬೆಳಗ್ಗೆ ದೆಹಲಿಗೆ ತೆರಳಲಿರುವ ಕುಮಾರಸ್ವಾಮಿ, ಅಂದು ಸಚಿವರಾದರಾಮ್‌ವಿಲಾಸ್‌ ಪಾಸ್ವಾನ್‌ ಹಾಗೂ ನಿತಿನ್‌ ಗಡ್ಕರಿ ಅವರನ್ನು  ಭೇಟಿ ಮಾಡುವರು.ಬುಧವಾರ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ರೈಲ್ವೆ, ಕಲ್ಲಿದ್ದಲು ಮತ್ತು ಹಣಕಾಸು ಸಚಿವ ಪಿಯೂಷ್‌ ಗೋಯೆಲ್‌ ಅವರೊಂದಿಗೆ ಸಮಾಲೋಚನೆ ನಡೆಸುವರು. ಸಂಜೆ ಸಂಸದರೊಂದಿಗಿನ ಸಭೆ ಮುಗಿಸಿ ಗುರುವಾರ ಬೆಳಗ್ಗೆ ಬೆಂಗಳೂರಿಗೆ ಹಿಂತಿರುಗುವರು. ಕಾಂಗ್ರೆಸ್‌ ರಾಷ್ಟ್ರೀಯ ನಾಯಕರನ್ನೂ ಮುಖ್ಯಮಂತ್ರಿಗಳು ಭೇಟಿ ಮಾಡುವ ಸಾಧ್ಯತೆ ಇದೆ. ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ಸೇರಿದಂತೆ ಸಮ್ಮಿಶ್ರ ಸರ್ಕಾರದಲ್ಲಿ ಉದ್ಭವವಾಗಿರುವ ಗೊಂದಲಗಳ ಬಗ್ಗೆಯೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next