Advertisement
ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು “ಡಿಎಲ್ ಅಮಾನತು’ ಅಸ್ತ್ರವನ್ನು ಹೆಚ್ಚಾಗಿ ಪ್ರಯೋಗಿಸಲು ಮುಂದಾಗಿದ್ದಾರೆ. ದ.ಕ. ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಪೊಲೀಸರು ಕೂಡ “ಡಿಎಲ್ ಅಮಾನತು’ಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಒಂದು ವರ್ಷದಲ್ಲಿ ಸಾವಿರಕ್ಕೂ ಅಧಿಕ ಡಿಎಲ್‌ಗಳನ್ನು ಅಮಾನತು ಮಾಡಲಾಗಿದೆ.
Related Articles
Advertisement
ಅಮಾನತು ಅವಧಿ ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿದೆ. ಕನಿಷ್ಠ 1ರಿಂದ 6 ತಿಂಗಳ ಅವಧಿ ಇರುತ್ತದೆ. ಸಾವು ಸಂಭವಿಸುವಂಥ ಪ್ರಕರಣಗಳಲ್ಲಿ 6 ತಿಂಗಳವರೆಗೂ ಡಿಎಲ್ ಅಮಾನತು ಮಾಡಲಾಗುತ್ತಿದೆ. ಪೊಲೀಸರು ನೀಡುವ ಶಿಫಾರಸಿನ ಬಳಿಕ ಆರ್‌ಟಿಒ ಅಧಿಕಾರಿಗಳು ನೋಟಿಸ್ ಪ್ರಕ್ರಿಯೆ ನಡೆಸಿ ಅಮಾನತುಗೊಳಿಸುತ್ತಾರೆ.
ಎಲ್ಲಿ, ಎಷ್ಟು?
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2023ರಲ್ಲಿ 1,400 ಮತ್ತು 2024ರ ಆಗಸ್ಟ್ ವರೆಗೆ 900 ಡಿಎಲ್‌ಗಳ ಅಮಾನತಿಗೆ ಪೊಲೀಸರು ಆರ್‌ಟಿಒಗೆ ಶಿಫಾರಸು ಮಾಡಿದ್ದಾರೆ. ಇದರಲ್ಲಿ 1,200 ಮಂದಿ ದ್ವಿಚಕ್ರ ವಾಹನ ಸವಾರರು. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2023ರಲ್ಲಿ 285 ಹಾಗೂ 2024ರ ಆಗಸ್ಟ್ ವರೆಗೆ 197 ಚಾಲನಾ ಪರವಾನಿಗೆಗಳ ರದ್ದತಿಗೆ ಆರ್‌ಟಿಒಗೆ ಶಿಫಾರಸು ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ 2023ರಲ್ಲಿ ಪೊಲೀಸರು 188 ಡಿಎಲ್‌ಗಳ ಅಮಾನತಿಗೆ ಶಿಫಾರಸು ಮಾಡಿದ್ದು, ಅದರಲ್ಲಿ ಎಲ್ಲವೂ ಅಮಾನತಾಗಿದೆ. 2024ರ ಜೂನ್ ವರೆಗೆ 92 ಶಿಫಾರಸು ಮಾಡಿದ್ದು, ಈ ಪೈಕಿ 89 ಅಮಾನತಾಗಿದೆ. ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ 456 ಡಿಎಲ್‌ಗಳು, 2022-23ನೇ ಸಾಲಿನಲ್ಲಿ 225 ಡಿಎಲ್‌ಗಳು, 2023-24ರಲ್ಲಿ 90 ಸಹಿತ ಒಟ್ಟು 771 ಡ್ರೈವಿಂಗ್ ಲೈಸನ್ಸ್ ಅಮಾನತು ಮಾಡಲಾಗಿದೆ. ಮದ್ಯ ಸೇವಿಸಿ ವಾಹನ ಚಲಾಯಿಸಿದ 62 ಮಂದಿಯ ಡ್ರೈವಿಂಗ್ ಲೈಸನ್ಸ್ ರದ್ದು ಮಾಡಲಾಗಿದೆ. ಶಿಫಾರಸು ಆಗಿರುವ ವರದಿಗಳಲ್ಲಿ ಇನ್ನೂ 1,150 ಪರವಾನಿಗೆಗಳ ಅಮಾನತು ಪ್ರಕ್ರಿಯೆ ಜಾರಿಯಲ್ಲಿದೆ. ಪುತ್ತೂರು ಆರ್‌ಟಿಒ ವ್ಯಾಪ್ತಿಯಲ್ಲಿ 2023-24ರಲ್ಲಿ 127, ಈ ಸಾಲಿನಲ್ಲಿ ಆಗಸ್ಟ್ ವರೆಗೆ 50 ಡಿಎಲ್‌ಗಳನ್ನು ಅಮಾನತು ಮಾಡಲಾಗಿದ್ದು, ಪೊಲೀಸರಿಂದ ಶಿಫಾರಸು ಆಗಿರುವ ಡಿಎಲ್‌ಗಳ ಪೈಕಿ ಇನ್ನೂ ಸುಮಾರು 110ರಷ್ಟು ಅಮಾನತು ಬಾಕಿ ಇದೆ. ಬಂಟ್ವಾಳದಲ್ಲಿ 2023-24ರಲ್ಲಿ 125 ಹಾಗೂ 24-25ನೇ ಸಾಲಿನಲ್ಲಿ ಆಗಸ್ಟ್ ವರೆಗೆ 53 ಲೈಸನ್ಸ್ ಅಮಾನತುಗೊಳಿಸಲಾಗಿದೆ.
ಉಡುಪಿಯಲ್ಲಿ ಅತ್ಯಧಿಕ :
ಕಳೆದ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಡಿಎಲ್ ಅಮಾನತು ಮಾಡಲಾಗಿದೆ. ಅಪಘಾತ ಸಂದರ್ಭ ಮಾತ್ರವಲ್ಲದೆ ಸಂಚಾರ ನಿಯಮ ಪದೇಪದೆ ಉಲ್ಲಂಘನೆ, ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮೊದಲಾದ ಪ್ರಕರಣಗಳಲ್ಲೂ ಡಿಎಲ್ ಅಮಾನತು ಮಾಡಲು ಆರ್‌ಟಿಒಗೆ ಶಿಫಾರಸು ಮಾಡುತ್ತಿದ್ದೇವೆ. ಡಿಎಲ್ ಮಾತ್ರವಲ್ಲದೆ, 2023ರಲ್ಲಿ 4 ಹಾಗೂ 2024ರ ಜೂನ್ ವರೆಗೆ 8 ಆರ್‌ಸಿಗಳನ್ನು ಕೂಡ ಅಮಾನತು ಮಾಡಲಾಗಿದೆ.– ಡಾ| ಅರುಣ್ ಕೆ., ಎಸ್‌ಪಿ, ಉಡುಪಿ
ಹಲವು ಕಡೆಗಳಿಂದ ಶಿಫಾರಸು:
ಉಡುಪಿ ಜಿಲ್ಲೆಯ ಪೊಲೀಸರು ಮಾತ್ರವಲ್ಲದೆ, ಉಡುಪಿ ಜಿಲ್ಲೆಯಲ್ಲಿ ನೋಂದಾಯಿತ ವಾಹನಗಳು ಬೇರೆ ಜಿಲ್ಲೆಗಳಿಗೆ ಹೋಗಿ ಅಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆಯಾದ ಸಂದರ್ಭಗಳಲ್ಲಿ ಅಲ್ಲಿನ ಪೊಲೀಸರು ಕೂಡ ಉಡುಪಿ ಆರ್‌ಟಿಒಗೆ ಡಿಎಲ್ ಅಮಾನತಿಗೆ ಶಿಫಾರಸು ಮಾಡುತ್ತಿದ್ದಾರೆ. ಆರ್‌ಟಿಒ ಕೂಡ ಸ್ವಯಂ ಪ್ರಕರಣ ದಾಖಲಿಸಿ ಡಿಎಲ್ ಅಮಾನತು ಮಾಡಬಹುದಾಗಿದೆ.-ಎಲ್.ಪಿ.ನಾಯಕ್ ಆರ್‌ಟಿಒ, ಉಡುಪಿ
ಡಿಎಲ್ ಅಮಾನತಿಗೆ ಆದ್ಯತೆ
ವಾಹನ ಸಂಚಾರ ನಿಯಮ ಉಲ್ಲಂಘನೆಗೆ ಕೇವಲ ದಂಡ ವಸೂಲಿ, ಪ್ರಕರಣ ದಾಖಲು ಮಾತ್ರವಲ್ಲದೆ ಡಿಎಲ್ ಅಮಾನತನ್ನು ಕೂಡ ಹೆಚ್ಚೆಚ್ಚು ಮಾಡಲಾಗುತ್ತಿದೆ. ಸದ್ಯ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ, ಅಪಘಾತದಿಂದ ಮೃತಪಟ್ಟ ಪ್ರಕರಣಗಳ ಸಂದರ್ಭ(106 ಬಿಎನ್‌ಎಸ್) ಮೊದಲ ಬಾರಿಗೆ ಡಿಎಲ್ ಅಮಾನತು ಮಾಡುತ್ತಿದ್ದೇವೆ. ಅತಿವೇಗ, ನಿರ್ಲಕ್ಷ್ಯದ ಚಾಲನೆ ಮೊದಲಾದ ಇತರ ಸಂಚಾರ ನಿಯಮಗಳ ಉಲ್ಲಂಘನೆ ಪುನರಾವರ್ತನೆಯಾದರೆ ಡಿಎಲ್ ಅಮಾನತು ಮಾಡುತ್ತಿದ್ದೇವೆ. - ಯತೀಶ್ ಎನ್. ಎಸ್‌ಪಿ, ದ.ಕ. ಜಿಲ್ಲೆ
– ಸಂತೋಷ್ ಬೊಳ್ಳೆಟ್ಟು