Advertisement

ಡಿಕೆಶಿಗೆ ತೊಂದರೆ ಕೊಡಲು ಸಮನ್ಸ್‌

06:00 AM Mar 08, 2019 | Team Udayavani |

ಬೆಂಗಳೂರು: ಐಟಿ ದಾಳಿ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ “ಕಾನೂನಿಗೆ ಅಜ್ಞಾತ’ವಾಗಿದ್ದು, ತಮ್ಮ ಕಕ್ಷಿದಾರರಿಗೆ ತೊಂದರೆ ನೀಡಲೆಂದು ಜಾರಿ ನಿರ್ದೇಶನಾಲಯ “ಹೈಬ್ರಿಡ್‌’ ಕ್ರಮವನ್ನು ಅನುಸರಿಸಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಪರ ವಕೀಲ ಕಪಿಲ್‌ ಸಿಬಲ್‌ ವಾದಿಸಿದ್ದಾರೆ.

Advertisement

ಜಾರಿ ನಿರ್ದೇಶನಾಲಯದ ಸಮನ್ಸ್‌ ರದ್ದುಗೊಳಿಸುವಂತೆ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಇತರರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ಪೀಠದ ಮುಂದೆ ಹಾಜರಾಗಿ ಗುರುವಾರ ವಾದ ಮಂಡಿಸಿದ ಕಪಿಲ್‌ ಸಿಬಲ್‌,  ಶೆಡ್ನೂಲ್ಡ್‌ ಅಪರಾಧಗಳು ಮಾತ್ರ ಜಾರಿ ನಿರ್ದೇಶನಾಲಯದ ತನಿಖೆಯ ವ್ಯಾಪ್ತಿಗೆ ಬರುತ್ತವೆ.

ಆದರೆ, ತಮ್ಮ ಕಕ್ಷಿದಾರ ಡಿ.ಕೆ. ಶಿವಕುಮಾರ್‌ ವಿರುದ್ಧ ಆದಾಯ ತೆರಿಗೆ ಕಾಯ್ದೆಯ 276ಸಿ ಹಾಗೂ 277 ಸೆಕ್ಷನ್‌ಗಳಡಿ ಕೇಸ್‌ ಇದೆ. ಈ ಎರಡೂ ಸೆಕ್ಷನ್‌ಗಳು ಶೆಡ್ನೂಲ್ಡ್‌ ಅಪರಾಧಗಳಲ್ಲ. ಹಾಗಾಗಿ ಇದರ ತನಿಖೆ ಜಾರಿ ನಿರ್ದೇಶನಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ತಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಔಪಚಾರಿಕ ದೂರು ಸಲ್ಲಿಕೆಯಾಗಿಲ್ಲ, ಎಫ್ಐಆರ್‌ ದಾಖಲಿಸಿಕೊಳ್ಳಲಾಗಿಲ್ಲ. ಆದರೂ, ವಿಚಾರಣೆಗೆ ಬರುವಂತೆ ಸಮನ್ಸ್‌ ನೀಡಲಾಗಿದೆ. ಇದರ ಅವಶ್ಯಕತೆ ಏನು? ಕಕ್ಷಿದಾರರಿಗೆ ತೊಂದರೆ ನೀಡಲು ಜಾರಿಗೊಳಿಸಿದಂತಿದೆ ಹೀಗಾಗಿ ಸಮನ್ಸ್‌ ರದ್ದುಗೊಳಿಸಬೇಕು ಎಂದು ಕೋರಿದರು.

ವಿಚಾರಣೆ ಮಾ.11ಕ್ಕೆ ಮುಂದೂಡಿಕೆ: ಅರ್ಜಿದಾರರ ಪರ ವಕೀಲರ ವಾದಕ್ಕೆ ಆಕ್ಷೇಪಣೆ ಸಲ್ಲಿಸಲು ಜಾರಿ ನಿರ್ದೇಶನಾಲಯದ ಪರ ವಕೀಲರು ಕಾಲಾವಕಾಶ ಕೋರಿದ್ದರಿಂದ ನ್ಯಾಯಪೀಠ ವಿಚಾರಣೆಯನ್ನು ಮಾ.11ಕೆ ಮುಂದೂಡಿತು. ಈ ವೇಳೆ ಸಮನ್ಸ್‌ ಕಾರ್ಯಗತಗೊಳಿಸದಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚನೆ ನೀಡಿ,

Advertisement

ವಕೀಲರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದು ಡಿಕೆಶಿ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಜಾರಿ ನಿರ್ದೇಶನಾಲಯ ಪರ ವಕೀಲರು, ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಆರಂಭವಾದ ದಿನಾಂಕದಿಂದ ಆರೋಪಿಗಳಿಗೆ ಯಾವುದೇ ನೋಟಿಸ್‌ ನೀಡಲಾಗಿಲ್ಲ. ಹೀಗಿರುವಾಗ ಮತ್ತದೇ ಹೇಳಿಕೆ ದಾಖಲಿಸಿಕೊಳ್ಳುವ ಔಚಿತ್ಯವೇನು ಎಂದು ಪ್ರಶ್ನಿಸಿದರು.

ಇದಕ್ಕೆ ಮರು ಆಕ್ಷೇಪ ವ್ಯಕ್ತಪಡಿಸಿದ ಕಪಿಲ್‌ ಸಿಬಲ್‌, ಜಾರಿ ನಿರ್ದೇಶನಾಲಯ ತನ್ನ ಈ ಹಿಂದಿನ ನಿಲುವಿಗೆ ಬದ್ಧವಾಗಿದ್ದರೆ, ತಮ್ಮದೇನು ಅಭ್ಯಂತರವಿಲ್ಲ. ಅದಾಗ್ಯೂ ತಮ್ಮ ಕಕ್ಷಿದಾರರಿಗೆ ಕಾನೂನಿನ ರಕ್ಷಣೆ ಬೇಕು ಎಂದು ಮನವಿ ಮಾಡಿದರು. ಡಿ.ಕೆ. ಶಿವಕುಮಾರ್‌ ಹಾಗೂ ಇತರರು ವಿಚಾರಣೆಗೆ ಹಾಜರಾಗಲು ವಿನಾಯ್ತಿ ಕೋರಿ ಜಾರಿ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಬೇಕು. ಅದನ್ನು ಜಾರಿ ನಿರ್ದೇಶನಾಲಯ ಪರಿಗಣಿಸಬೇಕು.

ಈ ಅವಧಿಯಲ್ಲಿ ಒಂದೊಮ್ಮೆ ಇಡಿಯಿಂದ ಬಲವಂತ ಅಥವಾ ತೊಂದರೆ ಎದುರಾದರೆ ಅರ್ಜಿದಾರರು ಕೋರ್ಟ್‌ ಗಮನಕ್ಕೆ ತರಬೇಕು ಎಂದು ಕೋರ್ಟ್‌ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next