ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕ್ಷೇತ್ರ ಭವಿಷ್ಯದ ಬಗ್ಗೆ ಆಡಳಿತಾರೂಢ ಕಾಂಗ್ರೆಸ್‌ಗೆ ಚಿಂತೆ ಶುರುವಾಗಿದ್ದು, ಭೋಜನಕೂಟದ ನೆಪದಲ್ಲಿ ಬುಧವಾರ ರಾತ್ರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ನಿವಾಸದಲ್ಲಿ ಸೇರಿದ್ದ ಸಿಎಂ ಹಾಗೂ ಸಚಿವರು ಚಿಂತನ-ಮಂಥನ ನಡೆಸಿದರು.
ಚುನಾವಣೆ ಬಳಿಕ ರಾಜ್ಯ ಸರಕಾರ ಉಳಿಯುವುದಿಲ್ಲ, ಗ್ಯಾರಂಟಿಗಳು ಮುಂದುವರಿಯುವುದಿಲ್ಲ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕು, ಇಲ್ಲದಿದ್ದರೆ ಮಂತ್ರಿ ಪದವಿ ಹೋಗುತ್ತದೆ ಎನ್ನುವ ಟಾಸ್ಕ್, ಸಂಪುಟ ಪುನಾರಚನೆ ಆಗಬಹುದು ಎನ್ನುವ ಚರ್ಚೆಗಳು ಮೊದಲಿನಿಂದ ಇದ್ದುದರಿಂದ ಔತಣ ಕೂಟವು ಒಂದು ರೀತಿಯ ಕೈಗೊಂಡ ಕ್ರಮಗಳ ವರದಿ ಕೇಳುವ ಸಭೆಯಂತಿತ್ತು.
ಚುನಾವಣೆ ಮುಗಿಯುತ್ತಿದ್ದಂತೆ ಪಕ್ಷದ ವತಿಯಿಂದ ವರದಿ ಪಡೆದಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಶಿವಕುಮಾರ್, ಭೋಜನ ಕೂಟ ಏರ್ಪಡಿಸಿದಾಗಲೇ ಸೂಕ್ಷ್ಮ ಅರಿತ ಸಚಿವರು ತಮ್ಮ ಕ್ಷೇತ್ರದ ವರದಿ ಹಿಡಿದೇ ಆಗಮಿಸಿದ್ದರು.
ಲೋಕಸಮರದ ಅನಂತರ ಇದೇ ಮೊದಲ ಬಾರಿಗೆ ಒಟ್ಟಿಗೆ ಸೇರಿದ ಮಂತ್ರಿಮಂಡಲದ ಸಹೋದ್ಯೋಗಿಗಳು, ಆರಂಭದಲ್ಲಿ ರಾಜ್ಯ ರಾಜಕಾರಣ, ಕೇಂದ್ರ ಸರಕಾರದ ಭವಿಷ್ಯ, ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ಸೇರಿ ಹಲವು ವಿಷಯಗಳ ಮೇಲೆ ಚರ್ಚೆ ಹೊರಳಿಸಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಆಗಮಿಸಿದ ಬಳಿಕ ಗಂಭೀರ ಸ್ವರೂಪ ಪಡೆದ ಸಭೆಯಲ್ಲಿ ಲೋಕಸಭೆ ಚುನಾವಣೆ ಮತ್ತು ರಾಜ್ಯದ 28 ಕ್ಷೇತ್ರಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದವು.