Advertisement

ದ.ಕ., ಉಡುಪಿ: ವೈದ್ಯರ ಮುಷ್ಕರ, ಬೃಹತ್‌ ರಾಲಿ

01:15 PM May 23, 2017 | Team Udayavani |

ಮಂಗಳೂರು: ವೈದ್ಯರು ಮತ್ತು ನರ್ಸಿಂಗ್‌ ಸಿಬಂದಿ ಮೇಲಿನ ಹಲ್ಲೆ ಹಾಗೂ ಆಸ್ಪತ್ರೆಗಳ ಮೇಲೆ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದನ್ನು ಖಂಡಿಸಿ ಹಾಗೂ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗೆ ಸೂಕ್ತ ರಕ್ಷಣೆ ಒದಗಿಸ ಬೇಕೆಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ ಹಾಗೂ ಸರ್ವ ವೈದ್ಯರ ಸಂಘಟನೆಗಳು ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕರೆ ನೀಡಲಾಗಿದ್ದ 24 ಗಂಟೆಗಳ ವೈದ್ಯಕೀಯ ಸೇವೆ ಬಂದ್‌ (ತುರ್ತು ಚಿಕಿತ್ಸೆಯನ್ನು ಹೊರತುಪಡಿಸಿ) ಚಳವಳಿ ಸೋಮವಾರ ಯಶಸ್ವಿಯಾಗಿ ನಡೆಯಿತು. 

Advertisement

ಇದೇ ವೇಳೆ ತುರ್ತು ಸೇವೆಯನ್ನು ಬಯಸಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ವೈದ್ಯರು ಮಾನವೀಯ ನೆಲೆಯಲ್ಲಿ ಅವಶ್ಯ ಸೇವೆ ಮತ್ತು ಚಿಕಿತ್ಸೆಯನ್ನು ಒದಗಿಸುವ ಮೂಲಕ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆದರು. 

ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಆಸ್ಪತ್ರೆ ಮೇಲಿನ ದಾಳಿ ಪ್ರಕರಣಗಳನ್ನು ಖಂಡಿಸಿ ಸೋಮವಾರ ಬೆಳಗ್ಗೆ 6ರಿಂದ ಮಂಗಳವಾರ ಬೆಳಗ್ಗಿನ 6 ಗಂಟೆ ತನಕ 24 ತಾಸುಗಳ ವೈದ್ಯಕೀಯ ಸೇವೆ ಬಂದ್‌ಗೆ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ ಹಾಗೂ ಸರ್ವ ವೈದ್ಯರ ಸಂಘಟನೆಗಳು ಕರೆ ನೀಡಿದ್ದವು. 

ಪ್ರತಿಭಟನ ಸಭೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ| ರಾಘವೇಂದ್ರ ಭಟ್‌ ಕೆ., ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಂ ಶೆಟ್ಟಿ , ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ಆಶ್ರಯ ಧಾಮದ ನಿವಾಸಿ ಶ್ರೀನಿವಾಸ್‌ ಕಾಮತ್‌ ಅವರು ಮಾತನಾಡಿದರು. ವೈದ್ಯರು ಮತ್ತು ವೈದ್ಯಕೀಯ ಸಿಬಂದಿ ಮೇಲಿನ ಹಲ್ಲೆ, ಆಸ್ಪತ್ರೆ ಮೇಲಿನ ದಾಳಿ ಘಟನೆಗಳನ್ನು ಅವರು ಖಂಡಿಸಿದರು. 

ವೈದ್ಯರ ಮೇಲೆ ಹಲ್ಲೆಯಂತಹ ಘಟನೆಗಳು ನಡೆದಾಗ ಆರೋಪಿಗಳಿಗೆ ಜಾಮೀನು ರಹಿತ ಬಂಧನ ವಿಧಿಸುವಂತಹ ಕಠಿನ ಕಾಯ್ದೆಯನ್ನು ರಾಜ್ಯ ಸರಕಾರ 2009ರಲ್ಲಿ (ದಿ| ಡಾ| ವಿ.ಎಸ್‌. ಆಚಾರ್ಯ ಅವರ ಮುತುವರ್ಜಿಯಿಂದ) ಜಾರಿಗೆ ತಂದಿದೆ. ಆದರೆ ಕಳೆದ 8 ವರ್ಷಗಳಲ್ಲಿ ವೈದ್ಯರ ಮೇಲಣ ಹಲ್ಲೆ ಘಟನೆಗಳಿಗೆ ಸಂಬಂಧಿಸಿ ಇದುವರೆಗೆ ಯಾವೊಬ್ಬ ಆರೋಪಿಯ ವಿರುದ್ಧವೂ ಈ ಕಾಯ್ದೆಯಡಿ ಕ್ರಮ ಜರಗಿಸಿದ ನಿದರ್ಶನ ಇಲ್ಲ ಎಂದು ಹೇಳಿದ ಡಾ| ರಾಘವೇಂದ್ರ ಭಟ್‌ ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

Advertisement

ದೇರಳಕಟ್ಟೆಯಲ್ಲಿ ಇತ್ತೀಚೆಗೆ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಉಳಿದ ಆರೋಪಿಗಳ ವಿರುದ್ಧ ಕ್ರಮ ಆಗಿಲ್ಲ ಎಂದ ಅವರು ಎಲ್ಲ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.

ಇಂತಹ ಘಟನೆಗಳು ವೈದ್ಯಕೀಯ ಕಾಶಿ ಎಂದು ಕರೆಯಲಾಗುವ ಮಂಗಳೂರಿಗೆ ಅವಮಾನ. ಸರಕಾರ ಮತ್ತು ಪೊಲೀಸರು ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಇಂತಹ ಘಟನೆ ಮರುಕಳಿಸ ಬಾರದು ಎಂದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಯನ್ನು ಅಭಿನಂದಿಸಿದ ಅವರು ಇಂತಹ ಏಕತೆ ಮುಂದುವರಿಯಲಿ. ಮುಂದೆ ಇಂತಹ ಘಟನೆ ನಡೆದರೆ ಉಪವಾಸ ಸತ್ಯಾಗ್ರಹಕ್ಕೂ ಹಿಂಜರಿಯ ಬಾರದು ಎಂದು ಹೇಳಿದರು. 

ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ಆಶ್ರಯ ಧಾಮದ ನಿವಾಸಿ ಶ್ರೀನಿವಾಸ್‌ ಕಾಮತ್‌ ಮಾತನಾಡಿ ವೈದ್ಯರನ್ನು ಹೊಡೆಯಬಾರದು. ಅವಶ್ಯ ಬಿದ್ದರೆ ಪ್ರಕರಣ ದಾಖಲಿಸಿ ಕಾನೂನಿನ ಮೊರೆ ಹೋಗಬಹುದು ಎಂದರು. 

ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ, ಅಸೋಸಿಯೇಶನ್‌ ಆಫ್‌ ಮೆಡಿಕಲ್‌ ಕನ್ಸಲ್ಟೆಂಟ್ಸ್‌, ಇಂಡಿಯನ್‌ ಡೆಂಟಲ್‌ ಅಸೋಸಿಯೇಶನ್‌ ಮತ್ತು ಸರ್ವ ವೈದ್ಯರ ಸಂಘಟನೆಗಳ ಪ್ರತಿನಿಧಿಗಳಾದ ಡಾ| ಕೆ.ಆರ್‌. ಕಾಮತ್‌, ಡಾ| ಕದ್ರಿ ಯೋಗೇಶ್‌ ಬಂಗೇರ, ಡಾ| ಅನಂತ ರಾವ್‌ ಪ್ರಸಾದ್‌, ಡಾ| ಅಣ್ಣಯ್ಯ ಕುಲಾಲ್‌, ಡಾ| ಸಂತೋಷ್‌ ಸೋನ್ಸ್‌, ಡಾ| ಭರತ್‌ ಶೆಟ್ಟಿ, ಡಾ| ದಿವಾಕರ್‌ ಅವರು ಮಾತನಾಡಿದರು. ಡಾ| ಗುರುಪ್ರಸಾದ್‌ ಭಟ್‌, ಡಾ| ಸುಧೀರ್‌ ಹೆಗ್ಡೆ, ಡಾ| ಸತೀಶ್‌ ಭಟ್‌, ಡಾ| ಇರ್ಫಾನ್‌, ಡಾ| ವಿಕ್ರಂ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಡಾ| ಕೆ.ಆರ್‌. ಕಾಮತ್‌ ವಂದಿಸಿದರು. 

ಪ್ರತಿಭಟನ ಸಭೆಯ ಬಳಿಕ ಸಂಘದ ನಿಯೋಗವೊಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು. ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲ ವೈದ್ಯರು, ದಂತ ವೈದ್ಯರು, ಅರೆ ವೈದ್ಯಕೀಯ ಸಿಬಂದಿ, ನರ್ಸ್‌ಗಳು. ಫಿಸಿಯೋಥೆರಪಿ ವೈದ್ಯರು, ವೈದ್ಯಕೀಯ ಸೇವಾ ನಿರತ ಸಿಬಂದಿ, ವೈದ್ಯಕೀಯ ವಿದ್ಯಾರ್ಥಿಗಳು, ಪೋಷಕರು, ಸಮಾನ ಮನಸ್ಕ ನಾಗರಿಕರು, ಲಯನ್ಸ್‌, ರೋಟರಿ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next