Advertisement

ದ.ಕ., ಉಡುಪಿ: ನೋಂದಣಿ ಸ್ಥಗಿತ

01:13 AM Sep 24, 2019 | mahesh |

ಉಡುಪಿ/ ಮಂಗಳೂರು: ಸರ್ವರ್‌ ಸಮಸ್ಯೆಯಿಂದಾಗಿ ಸೋಮವಾರ ರಾಜ್ಯಾದ್ಯಂತ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ನೋಂದಣಿ ಆಗಲಿಲ್ಲ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸಾರ್ವಜನಿಕರು ತೊಂದರೆಗೊಳಗಾದರು. ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಮತ್ತು ಶನಿವಾರವೂ ಸ್ವಲ್ಪ ಮಟ್ಟಿನ ಸಮಸ್ಯೆಯಾಗಿತ್ತು. ಸೋಮವಾರ ರಾಜ್ಯವ್ಯಾಪಿಯಾಗಿದೆ.

Advertisement

ಉಡುಪಿ ಜಿಲ್ಲೆಯಲ್ಲಿ ಆರು ಸಬ್‌ರಿಜಿಸ್ಟ್ರಾರ್‌ ಕಚೇರಿಗಳಿವೆ. ಉಡುಪಿಯ ಕಚೇರಿ ಜಿಲ್ಲಾ ಕೇಂದ್ರವಾದ ಅತಿ ಹೆಚ್ಚು ವಹಿವಾಟು ನಡೆಯುವ ಕಚೇರಿ. ಉಡುಪಿ ಜಿಲ್ಲೆಯಲ್ಲಿ ಜಾಗದ ನೋಂದಣಿಯಿಂದ ಸರಕಾರಕ್ಕೆ ದಿನಕ್ಕೆ ಸುಮಾರು ಒಂದು ಕೋಟಿ ರೂ. ಆದಾಯ ಬರುತ್ತದೆ. ರಾಜ್ಯದ ಲೆಕ್ಕಾಚಾರ ತೆಗೆದುಕೊಂಡರೆ ಒಂದೇ ದಿನದಲ್ಲಿ ಸುಮಾರು ನೂರು ಕೋಟಿ ರೂ. ನಷ್ಟವಾಗಿರಬಹುದು.

ಇಂತಹ ನಷ್ಟ ಬೇರೆ ದಿನಗಳಲ್ಲಿ ಸರಿದೂಗುತ್ತದೆ. ಹೇಗಾದರೂ ಜನರು ನೋಂದಣಿ ಮಾಡಲೇಬೇಕು ಎಂಬ ವಾದ ಮಂಡಿಸಬಹುದು. ಮುಂದಿನ ಹತ್ತು ದಿನಗಳಲ್ಲಿ ಬಾಕಿಯಾದ ಕಡತಗಳನ್ನು ನೋಂದಣಿ ಮಾಡಿಸುತ್ತಾರೆ. ಇದಕ್ಕಿಂತ ದೊಡ್ಡ ಸಮಸ್ಯೆ ವಿದೇಶಗಳಿಂದ, ಪರವೂರುಗಳಿಂದ ನೋಂದಣಿಗೆಂದು ರಜೆ ಹಾಕಿ ಬರುವವರದ್ದಾಗಿದೆ. ಕೆಲವರು ಒಳ್ಳೆಯ ದಿನದಲ್ಲಿ ನೋಂದಣಿ ಮಾಡಬೇಕೆಂದು ಅದೇ ದಿನಕ್ಕೆ ನಿಗದಿಪಡಿಸಿರುತ್ತಾರೆ. ಪರವೂರುಗಳಿಂದ ಬರುವ ಜನರಿಗೆ ಇದು ಭಾರೀ ತೊಂದರೆ ಉಂಟು ಮಾಡುತ್ತಿದೆ.

ಕಾರಣಗಳೇನು?
ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿರುವ ತಾಂತ್ರಿಕ ಸಿಬಂದಿ ಸರಕಾರದಿಂದ ನೇಮಕ ಗೊಂಡವರಲ್ಲ. ತಾಂತ್ರಿಕ ಕೆಲಸಗಳಿಗೆ ಹೊರಗುತ್ತಿಗೆ ಕೊಟ್ಟಿದ್ದು ಈ ಸಿಬಂದಿಗಳು ಕಂಪೆನಿಯಿಂದ ನೇಮಕಗೊಂಡವರು. ನೋಂದಣಿ ಮಾಡಿಸಿಕೊಂಡ ಕಕ್ಷಿದಾರರಿಂದ ಒಂದು ಪುಟಕ್ಕೆ 40 ರೂ. ಸ್ಕ್ಯಾನಿಂಗ್‌ ಶುಲ್ಕವನ್ನು ಪಡೆಯು ತ್ತಿದ್ದು ಇದರಿಂದ ಅವರಿಗೆ ವೇತನ ಪಾವತಿಯಾಗಬೇಕು. ಕೆಲವು ತಿಂಗಳಿಂದ ಸಿಬಂದಿಗೆ ವೇತನ ಪಾವತಿಯಾಗಿಲ್ಲ ಎಂದು ತಿಳಿದುಬಂದಿದೆ. ಸರ್ವರ್‌ ಇತ್ಯಾದಿ ಸಮಸ್ಯೆಗಳು ತಲೆದೋರಿದಾಗ ತಾಂತ್ರಿಕ ಸಿಬಂದಿ ಪೂರ್ಣ ಮನಸ್ಸಿನಿಂದ ಕೆಲಸ ನಿರ್ವಹಿಸ ಬೇಕಾಗುತ್ತದೆ. ಆದರೆ ಇವರು ವೇತನ ಬಾರದ ಕಾರಣ ಅರೆಮನಸ್ಸಿನಲ್ಲಿರುವುದು ಸಮಸ್ಯೆ ತಾರಕಕ್ಕೇರಲು ಮುಖ್ಯ ಕಾರಣ ವಾಗಿದೆ ಎಂದು ತಿಳಿದುಬಂದಿದೆ. ಕೆಲವು ತಿಂಗಳ ಹಿಂದೆ ಸಿಬಂದಿಯನ್ನು ಸರಕಾರ ವರ್ಗಾವಣೆ ಮಾಡಿದಾಗ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ವೇತನದ ಸಮಸ್ಯೆ ತಲೆದೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next