Advertisement
ದ.ಕ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೋವಿಡ್- 19 ಲಸಿಕೆ ವಿತರಣೆ ಕುರಿತಂತೆ ಮೈಕ್ರೋ ಪ್ಲ್ಯಾನಿಂಗ್ ಕುರಿತು ಸಭೆ ರವಿವಾರವೂ ಮುಂದುವರಿಯಿತು. ತಾಲೂಕು ಆರೋಗ್ಯಾಧಿಕಾರಿಗಳು, ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು, ಆರೋಗ್ಯ ಇಲಾಖೆಯ ವೈದ್ಯರ ತಂಡ ಭಾಗವಹಿಸಿತ್ತು. ಲಸಿಕೆಗಳ ಸಾಗಾಟ, ಲಸಿಕೆಗಳ ಬಾಕ್ಸ್‌ಗಳನ್ನು ಜೋಪಾನ ಮಾಡುವುದು ಇದರ ಜತೆಗೆ ರೆಫ್ರಿಜರೇಟರ್ ವ್ಯವಸ್ಥೆಯ ಲಭ್ಯತೆ ಪರೀಕ್ಷೆ, ಸಿಬಂದಿ ಕಾರ್ಯ ನಿರ್ವಹಣೆ, ಲಸಿಕೆ ನೀಡಿದ ಬಳಿಕ ಇದರ ವರದಿಯನ್ನು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಈ ಬಳಿಕ ಆರೋಗ್ಯ ಇಲಾಖೆಗೆ ತಲುಪಿಸುವ ವಿಚಾರದ ಕುರಿತು ಚರ್ಚೆ ನಡೆಯಿತು.
Related Articles
Advertisement
ಒಟ್ಟು ಮೂರು ಹಂತ ಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ. ಆರಂಭದಲ್ಲಿ ಆರೋಗ್ಯ ಇಲಾಖೆ ಸಿಬಂದಿಗೆ ಈ ಬಳಿಕ ಫ್ರಂಟ್ ವಾರಿಯರ್‌ಗಳಿಗೆ ಅನಂತರ ರೋಗಿ ಗಳಿಗೆ ಹಾಗೂ 50 ವರ್ಷ ದಾಟಿದವರಿಗೆ ಕೋವಿಡ್ ಲಸಿಕೆಯನ್ನು ನೀಡುವ ಕುರಿತು ಈ ಮೈಕ್ರೋ ಪ್ಲ್ಯಾನಿಂಗ್ ಯೋಜನೆಯಲ್ಲಿ ಚರ್ಚೆ ನಡೆಯಿತು. ದ.ಕ. ಜಿಲ್ಲೆಯಲ್ಲಿ ಈಗಾಗಲೇ 40 ಸಾವಿರ ಮಂದಿಗೆ ಮೊದಲ ಹಂತದಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯವಾಗಲಿದೆ.
ಸದ್ಯದಲ್ಲೇ ಲಸಿಕೆ :
ರಾಜ್ಯಕ್ಕೆ ಶೀಘ್ರದಲ್ಲಿಯೇ ಲಸಿಕೆ ಬರುವ ಸಾಧ್ಯತೆ ಇದೆ. ಕೇಂದ್ರದಿಂದ ವಿಮಾನದ ಮುಖೇನ ಬೆಂಗಳೂರಿಗೆ ಮತ್ತು ಹುಬ್ಬಳ್ಳಿಗೆ ಲಸಿಕೆ ಬರಲಿದೆ. ಬೆಂಗಳೂರಿಗೆ ಬಂದ ಲಸಿಕೆಯು ಅಗತ್ಯಕ್ಕೆ ಅನುಸಾರವಾಗಿ ವಿಶೇಷ ವಾಹನದ ಮೂಲಕ ದ.ಕ. ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಬರಲಿದೆ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಈ ಎರಡೂ ಲಸಿಕೆಯಲ್ಲಿ ಯಾವ ಲಸಿಕೆ ಜಿಲ್ಲೆಗೆ ಬರಲಿದೆ ಎಂಬ ಬಗ್ಗೆ ಇನ್ನಷ್ಟೇ ನಿರ್ಧಾರ ಆಗಬೇಕಿದೆ.
ಜ. 16ರಂದು ಪ್ರಥಮ ಹಂತದಲ್ಲಿ ಎಂಟು ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು, ಬಳಿಕ ವಿವಿಧ ಹಂತಗಳಲ್ಲಿ ಲಸಿಕೆ ನೀಡಲಾಗುವುದು.-ಡಾ| ಸುಧೀರ್‌ಚಂದ್ರ ಸೂಡ, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ