Advertisement

ದ.ಕ.: ಕೋವಿಡ್-19 ಸೋಂಕಿಗೆ ಮತ್ತೆ ಮೂವರು ಬಲಿ; ಒಂದೇ ದಿನ 84 ಪಾಸಿಟಿವ್‌ ಪ್ರಕರಣ

08:12 PM Jul 01, 2020 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಮತ್ತೆ ಮೂವರು ಬಲಿಯಾಗಿದ್ದು, ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಬುಧವಾರ 84 ಮಂದಿಗೆ ಹೊಸದಾಗಿ ಕೋವಿಡ್-19 ದೃಢಪಟ್ಟಿದ್ದು, ಒಟ್ಟು ಸಂಖ್ಯೆ 823ಕ್ಕೆ ಏರಿಕೆಯಾಗಿದೆ.

Advertisement

ಮಂಗಳೂರು ನಿವಾಸಿ ಸುಮಾರು 72 ವರ್ಷದ ವೃದ್ಧ, ಉತ್ತರ ಕನ್ನಡ ಜಿಲ್ಲೆಯ 31 ವರ್ಷದ ಯುವಕ, 76 ವರ್ಷದ ವೃದ್ಧ ಮೃತಪಟ್ಟವರು.

ಮಂಗಳೂರು ಬೆಂಗ್ರೆ ನಿವಾಸಿ 72 ವರ್ಷದ ವೃದ್ಧ ಅಧಿಕ ರಕ್ತದೊತ್ತಡ, ಮಧುಮೇಹ, ಆಸ್ಪಿರೇಶನ್‌, ನ್ಯುಮೋನಿಯಾ, ಮೆದುಳಿನ ಉರಿಯೂತ ಮತ್ತು ಮಲೇರಿಯಾದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಜೂ. 30ರಂದು ವೆನಾÉಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಂದು ರಾತ್ರಿ ಮೃತಪಟ್ಟಿದ್ದರು. ಇದೀಗ ಅವರ ಗಂಟಲು ದ್ರವ ಮಾದರಿ ಪರೀಕ್ಷೆ ವರದಿಯಲ್ಲಿ ಕೋವಿಡ್-19 ಇರುವುದು ದೃಢಪಟ್ಟಿದೆ.

ತೀವ್ರ ಉಸಿರಾಟದ ಸಮಸ್ಯೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಉ. ಕನ್ನಡ ಜಿಲ್ಲೆಯ ಭಟ್ಕಳದ 31 ವರ್ಷದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಜೂ. 30ರಂದು ಮೃತಪಟ್ಟಿದ್ದಾರೆ. ಈತನ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬುಧವಾರ ಬಂದಿದ್ದು, ಕೋವಿಡ್-19 ಇರುವುದು ದೃಢಪಟ್ಟಿದೆ.

ಉ.ಕನ್ನಡ ಜಿಲ್ಲೆಯ 76 ವರ್ಷದ ವೃದ್ಧ ಡಯಾಬಿಟಿಸ್‌, ಅಧಿಕ ರಕ್ತದೊತ್ತಡ, ಶ್ವಾಸಕೋಶದ ಕಾಯಿಲೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮಧ್ಯಾಹ್ನದ ವೇಳೆಗೆ ಮೃತಪಟ್ಟರು. ಇವರಿಗೂ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.

Advertisement

84 ಮಂದಿಗೆ ಪಾಸಿಟಿವ್‌
ಜಿಲ್ಲೆಯಲ್ಲಿ ಬುಧವಾರ ಒಟ್ಟು 84 ಮಂದಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ. ಈ ಪೈಕಿ 6 ಮಂದಿ ಶಾರ್ಜಾದಿಂದ, ಓರ್ವ ಹೊರ ರಾಜ್ಯದಿಂದ ಆಗಮಿಸಿದ್ದಾರೆ. 28 ಮಂದಿ ಇನ್‌ಫ್ಲೂಯೆನಾl ಲೈಕ್‌ ಇಲ್‌ನೆಸ್‌ನಿಂದ ಬಳಲುತ್ತಿರುವವರಾಗಿದ್ದಾರೆ. 38 ಮಂದಿಗೆ ಈ ಹಿಂದೆ ಸೋಂಕು ದೃಢಪಟ್ಟ ರೋಗಿಗಳ ಪ್ರಾಥಮಿಕ ಸಂಪರ್ಕದಿಂದ ಪಾಸಿಟಿವ್‌ ಬಂದಿದ್ದರೆ, 11 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಹೆಚ್ಚು ಪಾಸಿಟಿವ್‌, ಕಡಿಮೆ ನೆಗೆಟಿವ್‌!
ವೆನ್ಲಾಕ್‌‌ ಕೋವಿಡ್‌ ಆಸ್ಪತ್ರೆಯಲ್ಲಿ ಬುಧವಾರ ಸ್ವೀಕರಿಸಲಾದ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಪೈಕಿ ನೆಗೆಟಿವ್‌ ವರದಿಗಿಂತ ಕೋವಿಡ್-19 ದೃಢಪಟ್ಟ ವರದಿಗಳೇ ಹೆಚ್ಚಿವೆ. ಒಟ್ಟು 145 ಮಾದರಿಗಳ ವರದಿ ಸ್ವೀಕರಿಸಲಾಗಿದ್ದು, ಈ ಪೈಕಿ 84 ಪಾಸಿಟಿವ್‌, 61 ನೆಗೆಟಿವ್‌ ಆಗಿದೆ. ಇದು ಜಿಲ್ಲೆಯಲ್ಲಿ ಕೋವಿಡ್-19 ಹರಡುತ್ತಿರುವ ವೇಗದ ಬಗ್ಗೆ ಮತ್ತಷ್ಟು ಆತಂಕ ಸೃಷ್ಟಿಸಿದೆ. ಈವರೆಗೆ ಸ್ವೀಕರಿಸುತ್ತಿದ್ದ ವರದಿಗಳಲ್ಲಿ ಪಾಸಿಟಿವ್‌ಗಿಂತ ನೆಗೆಟಿವ್‌ ಸಂಖ್ಯೆಯೇ ಹೆಚ್ಚಿರುತ್ತಿತ್ತು.

264 ಮಂದಿಯ ವರದಿ ಬರಲು ಬಾಕಿ ಇದ್ದು, ಬುಧವಾರ ಹೊಸದಾಗಿ 381 ಮಂದಿಯ ಮಾದರಿಗಳನ್ನು ಕಳುಹಿಸಲಾಗಿದೆ. 84 ಮಂದಿ ವಿವಿಧ ಅನಾರೋಗ್ಯದ ಕಾರಣಕ್ಕಾಗಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಐಸಿಯುನಲ್ಲಿ ಮೂವರು
ಕೋವಿಡ್-19 ದೃಢಪಟ್ಟು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಯಾಬಿಟಿಸ್‌ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ 49 ವರ್ಷದ ವ್ಯಕ್ತಿಗೆ ಎಚ್‌ಎಫ್‌ಎನ್‌ಸಿ ಮೂಲಕ ಆಮ್ಲಜನಕ ಪೂರೈಸಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿರುವ ಕಾರಣ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

57 ವರ್ಷದ ಮಹಿಳೆ ಲಿವರ್‌ ಕಾಯಿಲೆ, ಡಯಾಬಿಟಿಸ್‌, ಹೃದ್ರೋಗ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದು ಐಸಿಯುನಲ್ಲಿ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. 78 ವರ್ಷದ ವೃದ್ಧ ಡಯಾಬಿಟಿಸ್‌, ಅಧಿಕ ರಕ್ತದೊತ್ತಡ, ಪಾರ್ಕಿನ್ಸ‌ನ್‌ ಕಾಯಿಲೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 52 ವರ್ಷದ ಮಹಿಳೆ ಮಧುಮೇಹ ಮತ್ತು ಹೃದಯದ ಕಾಯಿಲೆಯಿಂದ ಬಳಲುತ್ತಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್-19 ದೃಢಪಟ್ಟು ವೆನ್ಲಾಕ್‌‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 71 ವರ್ಷದ ವೃದ್ಧ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಡಿಸಿ ಕಚೇರಿಗೆ ಪ್ರವೇಶ ನಿರ್ಬಂಧ
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿ, ಸಚಿವರ ಕಚೇರಿ ಮತ್ತು ಎಲ್ಲಾ ಕಚೇರಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡುವ ಕಾರಣದಿಂದ ಜು. 3ರಿಂದ 5ರವರೆಗೆ ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

ನಿಷೇಧಾಜ್ಞೆ ವಿಸ್ತರಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಜು. 31ರವರೆಗೆ ನಿಷೇಧಾಜ್ಞೆ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಆದೇಶಿಸಿದ್ದಾರೆ. ಪ್ರಸ್ತುತ ನಿಷೇಧಾಜ್ಞೆ ಸಮಯ ಬದಲಾವಣೆಯಾಗಿದ್ದು, ರಾತ್ರಿ 8ರಿಂದ ಬೆಳಗ್ಗೆ 5 ಗಂಟೆಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next