ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣದಲ್ಲಿದ್ದು, ಸತತ 12ನೇ ದಿನವೂ ಪಾಸಿಟಿವ್ ಪ್ರಕರಣ ದಾಖಲಾಗಲಿಲ್ಲ. ಗುರುವಾರ ಒಟ್ಟು 113 ಮಂದಿಯ ಗಂಟಲು ದ್ರವ ಮಾದರಿಯ ವರದಿ ಬಂದಿದ್ದು, ಯಾವುದೇ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ. ಒಟ್ಟು 24 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 59 ವರದಿ ಬಾಕಿ ಇವೆ. ಒಟ್ಟು 797 ಮಂದಿ ಗೃಹನಿಗಾದಲ್ಲಿದ್ದಾರೆ. ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 25 ಮಂದಿಯ ಪೈಕಿ ಗುರುವಾರ 15 ಮಂದಿ ಬಿಡುಗಡೆಗೊಂಡಿದ್ದಾರೆ.
ಫಿವರ್ ಕ್ಲಿನಿಕ್‌ನಲ್ಲಿ ಗುರುವಾರ 58 ಮಂದಿಯನ್ನು ತಪಾಸಣೆ ನಡೆಸಲಾಗಿದ್ದು, ಈವರೆಗೆ 334 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕೋವಿಡ್-19 ದೃಢಪಟ್ಟು ಚಿಕಿತ್ಸೆಗೆ ಒಳಗಾ ಗಿದ್ದ 12 ಮಂದಿ ಸೋಂಕಿತರ ಪೈಕಿ 9 ಮಂದಿ ಗುಣಮುಖರಾಗಿ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಆಶಾ ಕಾರ್ಯಕರ್ತೆಯರು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಎಂಪಿಡಬ್ಲ್ಯು ಕಾರ್ಯಕರ್ತರು ಕೈಗೊಂಡಿರುವ ಸರ್ವೆಯಲ್ಲಿ 30,000 ಕುಟುಂಬಗಳ ಮಾಹಿತಿ ಸಂಗ್ರಹಿಸಿ ಗಣಕೀ ಕೃತಗೊಳಿಸಲಾಗಿದೆ. ಇದರಿಂದ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಅನುಕೂಲವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಅನಧಿಕೃತ ಕ್ಲಿನಿಕ್ ಬಂದ್ ಮಾಡಿದ ಆರೋಗ್ಯ ಇಲಾಖೆ
ನೋಂದಣಿಗೊಳ್ಳದೆ ಸುರತ್ಕಲ್ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಖಾಸಗಿ ವೈದ್ಯರ ಕ್ಲಿನಿಕ್ ಮೇಲೆ ಗುರುವಾರ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಕ್ಲಿನಿಕ್‌ಗೆ ಬೀಗ ಜಡಿದಿದ್ದಾರೆ. ಸುರತ್ಕಲ್‌ನಲ್ಲಿದ್ದ ಶ್ರೀ ರಾಘವೇಂದ್ರ ಕ್ಲಿನಿಕ್‌ನ ನೋಂದಣಿ 2017ರಲ್ಲೇ ಮುಕ್ತಾಯವಾಗಿದ್ದು, ನವೀಕರಿಸಿರಲಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ನಿರ್ದೇಶನದ ಮೇರೆಗೆ ಇಲಾಖೆಯ ಅಧಿಕಾರಿ ಡಾ| ಸಿಖಂದರ್ ಪಾಶಾ ಕ್ಲಿನಿಕ್‌ಗೆ ದಾಳಿ ಮಾಡಿದ್ದು, ಮುಂದಿನ ಆದೇಶದ ವರೆಗೆ ಮುಚ್ಚಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಆಸ್ಪತ್ರೆ, ಕ್ಲಿನಿಕ್, ಲ್ಯಾಬೋರೋಟರಿ, ಹೋಮಿಯೋಪತಿ ಕ್ಲಿನಿಕ್, ಆಯುಷ್ ಕ್ಲಿನಿಕ್ ಹಾಗೂ ಇತರ ಸಂಸ್ಥೆಗಳು ಕೆಪಿಎಂಇ ಅಡಿಯಲ್ಲಿ ನೋಂದಣಿ ಆಗದಿದ್ದರೆ ಅಥವಾ 5 ವರ್ಷ ಮೀರಿಯೂ ನವೀಕರಣ ಆಗದೇ ಇದ್ದರೆ ಕೂಡಲೇ ಆನ್‌ಲೈನ್ ಮೂಲಕ ನೋಂದಣಿ, ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ನೋಂದಣಿ, ನವೀಕರಣಗೊಳಿಸದೇ ಇರುವ ಸಂಸ್ಥೆಗಳ ವಿರುದ್ಧ ಕೆಪಿಎಂ ಕಾಯ್ದೆ ಮತ್ತು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.