Advertisement

ಕಾಂಗ್ರೆಸ್‌ ಕಾರ್ಯಕರ್ತರ ಚಳಿ ಬಿಡಿಸಿದ ಡಿ.ಕೆ.ಸುರೇಶ್‌

04:39 PM May 13, 2019 | Team Udayavani |

ಕುಣಿಗಲ್: ಪುರಸಭೆ ಚುನಾವಣೆ ಸಂಬಂಧ ಅಧಿಕೃತವಾಗಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಮುನ್ನವೇ, ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕರಪತ್ರ ಮುದ್ರಿಸಿಕೊಂಡು ತಾವೇ ಅಭ್ಯರ್ಥಿ ಎಂದು ಪ್ರಚಾರದಲ್ಲಿ ತೊಡಗಿರುವ ಕೆಲವು ಕಾಂಗ್ರೆಸ್‌ ಕಾರ್ಯಕರ್ತರ ಧೋರಣೆ ಬಗ್ಗೆ ಕೆಂಡಾಮಂಡಲರಾದ ಸಂಸದ ಡಿ.ಕೆ.ಸುರೇಶ್‌, ಸ್ವಯಂಘೋಷಣೆ ಮಾಡಿಕೊಳ್ಳುವ ಅಧಿಕಾರ ನಿಮಗೆ ಕೊಟ್ಟವರು ಯಾರು ಎಂದು ಆಕಾಂಕ್ಷಿ ಅಭ್ಯರ್ಥಿಗಳ ಚಳಿ ಬಿಡಿಸಿದ ಪ್ರಸಂಗ ತಾಲೂಕು ಹೊರವಲಯದ ಖಾಸಗಿ ಗೆಸ್ಟ್‌ ಹೌಸ್‌ನಲ್ಲಿ ನಡೆಯಿತು.

Advertisement

ಮೇ 29ರಂದು ನಡೆಯುವ ಕುಣಿಗಲ್ ಪುರಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಎಡಿಯೂರು ಸಮೀಪದ ಕಾಳಿಂಗನಹಳ್ಳಿ ಖಾಸಗಿ ಗೆಸ್ಟ್‌ಹೌಸ್‌ನಲ್ಲಿ ಸಂಸದ ಡಿ.ಕೆ.ಸುರೇಶ್‌, ಶಾಸಕ ಡಾ.ಎಚ್.ಡಿ.ರಂಗನಾಥ್‌ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿ ಕಾರ್ಯಕರ್ತರಿಗೆ ಸಂಸದರು ಕ್ಲಾಸ್‌ ತೆಗೆದುಕೊಂಡರು.

ಆಟ ನಡೆಯುವುದಿಲ್ಲ: ಇದೇ ತಿಂಗಳು 29 ರಂದು ಕುಣಿಗಲ್ ಪುರಸಭೆಯ 23ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ 23ವಾರ್ಡ್‌ಗಳ ಆಕಾಂಕ್ಷಿ ಅಭ್ಯರ್ಥಿಗಳು ಸೇರಿದಂತೆ 100ಅಧಿಕ ಕಾರ್ಯಕರ್ತರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ತಮಗೆ ಟಿಕೆಟ್ ನೀಡುವಂತೆ ಸಂಸದರಿಗೆ ಮನವಿ ಮಾಡಿದರು. ಇದರಿಂದ ಕೆಂಡಾಮಂಡಲರಾದ ಸಂಸದ ಡಿ.ಕೆ.ಸುರೇಶ್‌, ಚುನಾವಣೆ ಎಂದರೆ ಮಕ್ಕಳ ಆಟವಲ್ಲ ಎಂದು ಎಚ್ಚರಿಕೆ ನೀಡಿದರು.

ಸ್ಥಳೀಯ ಜನರಿಗೆ ಸರ್ಕಾರದಿಂದ ಹಾಗೂ ಸ್ಥಳೀಯ ಸಂಸ್ಥೆಯಿಂದ ಸಿಗುವ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಟ್ಟು, ಜನರ ವಿಶ್ವಾಸ ಗಳಿಸಬೇಕು. ಅಲ್ಲದೇ, ತಮ್ಮ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುವಂತಹ ರಾಜಕೀಯ ಚಾಣಾಕ್ಷತನ ಇರಬೇಕು. ಇಲ್ಲವಾದಲ್ಲಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಇದನ್ನು ಅನುಸರಿಸದೇ, ತಮಗೆ ಬೇಕಾದ ವಾರ್ಡ್‌ಗಳನ್ನು ತಾವೇ ಆಯ್ಕೆ ಮಾಡಿಕೊಂಡು ನಾನೇ ಅಭ್ಯರ್ಥಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕರಪತ್ರಗಳನ್ನು ಮುದ್ರಿಸಿಕೊಂಡು ಪ್ರಚಾರದಲ್ಲಿ ತೊಡಗಿಸಿ ಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಖಾರವಾಗಿ ಪ್ರಶ್ನಿಸಿದರು. ಎಲ್ಲವನ್ನೂ ಕಾರ್ಯಕರ್ತರೇ ತಿರ್ಮಾನ ಮಾಡುವುದಾದರೆ ಪಕ್ಷ ಏಕೆ ಎಂದು ಕಿಡಿಕಾರಿದ ಸಂಸದರು, ಈ ಆಟ ನಡೆಯುವುದಿಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಶಿಫಾರಸು ನಡೆಯಲ್ಲ: ಟಿಕೆಟ್ಗಾಗಿ ಸಚಿವರು ಸೇರಿದಂತೆ ಹಲವು ಮುಖಂಡರಿಂದ ಒತ್ತಡ ಹಾಕುತ್ತಿರುವುದರ ಬಗ್ಗೆ ಆಕಾಂಕ್ಷಿಗಳನ್ನು ತರಾಟೆ ತೆಗೆದುಕೊಂಡ ಸಂಸದರು, ಸ್ಥಳೀಯ ಜನಪ್ರಿಯತೆ ಹೊಂದಿದ ವ್ಯಕ್ತಿಗಳಿಗೆ ಹಾಗೂ ಗೆಲ್ಲುವಂತಹ ಅಭ್ಯರ್ಥಿಗಳನ್ನು ಗುರುತಿಸಿ ಬಿ.ಫಾರಂ ನೀಡಲಾಗುವುದು. ಟಿಕೆಟ್ಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಡೂರಾವ್‌, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಡಿ.ಕೆ.ಶಿವಕುಮಾರ್‌, ಜಮೀರ್‌ಅಹಮದ್‌ ಅವರಿಂದ ಒತ್ತಡ ಹಾಕಿಸಿದರೆ ಅದಕ್ಕೆ ಮಣಿಯುವುದಿಲ್ಲ. ಈಗಾಗಲೇ ಪಟ್ಟಣದ 23ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಯಾರಿಗೆ ಟಿಕೆಟ್ ನೀಡಬೇಕೆಂಬುದು ತೀರ್ಮಾನ ಕೈಗೊಳ್ಳಲಾಗುವುದೆಂದು ಹೇಳಿದರು.

Advertisement

ಅಭ್ಯರ್ಥಿ ಎದೆಯಲ್ಲಿ ಡವಡವ: ಟಿಕೆಟ್ ನಮಗೆ ಖಚಿತ ಎಂದು ಹೇಳಿಕೊಂಡು ಪ್ರಚಾರದಲ್ಲಿ ತೊಡಗಿದ್ದ ಆಕಾಂಕ್ಷಿ ಅಭ್ಯರ್ಥಿಗಳಿಗೆ ಸಂಸದರ ಖಡಕ್‌ ಎಚ್ಚರಿಕೆಯಿಂದ ಎದೆಯಲ್ಲಿ ಡವಡ‌ವ ಶುರುವಾಗಿದೆ.

ಹೊಸಮುಖಕ್ಕೆ ಅವಕಾಶ ನೀಡಿ: ಇದಕ್ಕೂ ಮುನ್ನಾ ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ಹಿರಿಯ ಮುಖಂಡರು ಮಾತನಾಡಿ, ಡಿ.ಕೆ.ಸುರೇಶ್‌ ಅವರು ಸಂಸದರಾದ ಮೇಲೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಚತುಷ್ಪಥ ರಸ್ತೆ, ಒಳಚರಂಡಿ, ದೊಡ್ಡಕೆರೆ ಸೌಂದರೀಕರಣ, ಶುದ್ಧ ಕುಡಿಯುವ ನೀರಿನ ಘಟಕಗಳು, ಪುರಸಭೆ ನೂತನ ಕಚೇರಿ ಕಟ್ಟಡ, ವಿದ್ಯುತ್‌ ಚಿತಾಗಾರ, ಕರ್ನಾಟಕ ನೀರು ಮತ್ತು ಒಳಚರಂಡಿ ಮಂಡಳಿಯಿಂದ ಸ್ಲಂ ನಿವಾಸಿಗಳಿಗೆ 500ಮನೆ ಮಂಜೂರು, ಮಿನಿ ವಿಧಾನಸೌಧಕ್ಕೆ ಹೆಚ್ಚಿನ ಅನುದಾನ, ಐದು ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗೆ ಕ್ರಮ ಸೇರಿದಂತೆ ನೂರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಮತಷ್ಟು ಪಟ್ಟಣ ಅಭಿವೃದ್ಧಿಯಾಗಬೇಕಾದರೆ ಪುರಸಭೆಗೆ ಕಾಂಗ್ರೆಸ್‌ ಆಡಳಿತ ಬರಬೇಕಾಗಿದೆ. ಹೀಗಾಗಿ, ಈ ಬಾರಿ ಪುರಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಆಡಳಿತ ಚುಕ್ಕಾಣಿ ಹಿಡಿಯಬೇಕಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next