ಗಂಗೊಳ್ಳಿ: ಸಮಾಜದ ಎಲ್ಲ ವರ್ಗದವರ ಮೇಲೂ ನಿರ್ಬಂಧ ಹೇರಲಾಗುತ್ತಿದೆ. ಮೀನುಗಾರರು ಕೊರೊನಾ ಕಾರಣಗಳಿಂದಾಗಿ ಕಳೆದ ಒಂದು ವರ್ಷಗಳಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದರೆ ಸರಕಾರದಿಂದ ಅವರಿಗೆ ಯಾವುದೇ ರೀತಿಯ ನಿರೀಕ್ಷಿತ ನೆರವು ಸಿಗುತ್ತಿಲ್ಲ ಎಂದು ಎನ್ನುವು ಕಾಂಗ್ರೆಸ್ ಮುಖಂಡ, ಸಂಸದ ಡಿ.ಕೆ. ಸುರೇಶ್ ಹೇಳಿದರು.
ಶನಿವಾರ ಅವರು ಉಡುಪಿ ಜಿಲ್ಲೆಯಿಂದ ಕಾರವಾರ ಜಿಲ್ಲೆಯ ಭಟ್ಕಳದವರೆಗಿನ ಮೀನುಗಾರರ ಚಟುವಟಿಕೆಗಳನ್ನು ವೀಕ್ಷಿಸಲು ಮೀನುಗಾರರೊಂದಿಗೆ ಬೋಟ್‌ನಲ್ಲಿ ತೆರಳಿ ಸಮಸ್ಯೆ ಆಲಿಸಿದರು. ಈ ವೇಳೆ ಗಂಗೊಳ್ಳಿಯಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಸಾಹಸಮಯವಾದ ಜೀವನ ನಡೆಸುತ್ತಿರುವ ಲಕ್ಷಾಂತರ ಮಂದಿ ಮೀನುಗಾರರ ಕುಟುಂಬ ಕಷ್ಟದ ಜೀವನ ನಡೆಸುತ್ತಿದ್ದಾರೆ. ತೈಲ ಬೆಲೆಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕೊರೊನಾ ಸಂಕಷ್ಟ ಒಂದೆಡೆಯಾದರೆ, ಮೀನುಗಾರಿಕೆಯಲ್ಲಿಯೂ ಕೂಡ ಇತ್ತೀಚಿಗಿನ ದಿನಗಳಲ್ಲಿ ಸಣ್ಣ ಪುಟ್ಟ ಮೀನುಗಳನ್ನು ಹೊರತುಪಡಿಸಿ, ದೊಡ್ಡ ಆದಾಯ ತರುವ ಯಾವುದೇ ಮೀನುಗಳು ದೊರಕುತ್ತಿಲ್ಲ ಎನ್ನುವುದನ್ನು ಕರಾವಳಿಯ ಮೀನುಗಾರ ಬಂಧುಗಳು ಹೇಳುತ್ತಿದ್ದಾರೆ. ರೈತರ, ಯುವಕರ, ಮೀನುಗಾರರ, ಜನ ಸಾಮಾನ್ಯರ ಮಾತಗಳನ್ನು ಸರಕಾರ ಕೇಳುತ್ತಿಲ್ಲ ಎಂದ ಅವರು ಮುಂಬರುವ ದಿನಗಳಲ್ಲಿ ಮೀನುಗಾರರ ಸಮಸ್ಯೆಗಳ ಕುರಿತು ಲೋಕಸಭೆಯಲ್ಲಿ ಅವಕಾಶ ದೊರಕಿದಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಸುರೇಶ್ ಚಾತ್ರಬೆಟ್ಟು, ಶಂಕರ ಪೂಜಾರಿ ಬೀಜಾಡಿ, ಅನಿಲ್, ಸುನೀಲ್ ಮತ್ತಿತರರಿದ್ದರು.