Advertisement

BY-ELECTION: ಡಿ.ಕೆ.ಶಿವಕುಮಾರ್‌ ಮುಂದಿನ ಸಿಎಂ: ಚರ್ಚೆ ಮತ್ತೆ ಆರಂಭ

12:40 AM Oct 28, 2024 | Team Udayavani |

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಒಕ್ಕಲಿಗ ಕಾಂಗ್ರೆಸ್‌ ನಾಯಕರು ಚನ್ನಪಟ್ಟಣ ಗೆದ್ದರೆ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳುತ್ತಿದ್ದು, ಈ ಉಪಚುನಾವಣೆ ನಡೆಯುತ್ತಿರುವುದು ಕ್ಷೇತ್ರ ಶಾಸಕರ ಆಯ್ಕೆಗಾ? ಇಲ್ಲ ಮುಂದಿನ ಮುಖ್ಯಮಂತ್ರಿ ಆಯ್ಕೆಗಾ? ಎಂಬ ಪ್ರಶ್ನೆ ಇದೀಗ ಎದುರಾಗಿದೆ.

Advertisement

ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ಪ್ರಚಾರ ನಡೆಸುತ್ತಿರುವ ಬಹುತೇಕ ಒಕ್ಕಲಿಗ ನಾಯಕರು ಡಿ.ಕೆ.ಶಿ. ಮುಂದಿನ ಮುಖ್ಯಮಂತ್ರಿಯಾಗುತ್ತಾರೆ. ಇದಕ್ಕೆ ಈ ಉಪಚುನಾವಣೆಯೇ ಭೂಮಿಕೆ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಉಪಚುನಾವಣೆ ಕಾವೇರುತ್ತಿರುವ ನಡುವೆಯೇ ಸಿಎಂ ಯಾರು ಎಂಬ ಚರ್ಚೆ ಮುನ್ನೆಲೆಗೆ ಬಂದಿರುವುದು ಸಾಕಷ್ಟು ಮಹತ್ವ ಪಡೆದಿದೆ.

ಈ ಅವಧಿಯಲ್ಲೇ ಮುಖ್ಯಮಂತ್ರಿ
ಶನಿವಾರ ರಾಮನಗರ ಜಿಲ್ಲೆ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್, ಯೋಗೇಶ್ವರ್‌ ಅವರನ್ನು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಯೋಗೇಶ್ವರ್‌ ಗೆದ್ದರೆ ಈ ಅವಧಿಯಲ್ಲೇ ಡಿ.ಕೆ. ಶಿವಕುಮಾರ್‌ ಅವರನ್ನು ಸಿಎಂ ಮಾಡಬಹುದು. ನಮ್ಮ ಜಿಲ್ಲೆಯ ಮಗನನ್ನು ಮುಖ್ಯಮಂತ್ರಿ ಮಾಡಲು ಕ್ಷೇತ್ರದ ಕಾರ್ಯಕರ್ತರು ಉಪಚುನಾವಣೆಯಲ್ಲಿ ಹೆಚ್ಚು ಶ್ರಮಿಸಬೇಕು ಎಂದು ತಿಳಿಸಿದ್ದಾರೆ.

ಮುಂದುವರಿದ ಹೇಳಿಕೆ
ಸಿಎಂ ಬದಲಾವಣೆ ಪ್ರಸ್ತಾವ ರವಿವಾರವೂ ಮುಂದುವರಿದಿದೆ. ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಸಿದ್ದರಾಮಯ್ಯ ಬಳಿಕ ಸಿಎಂ ಆಗುವ ಎಲ್ಲ ಅವಕಾಶ ಡಿ.ಕೆ. ಶಿವಕುಮಾರ್‌ ಅವರಿಗಿದೆ. ಯೋಗೇಶ್ವರ್‌ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿದರೆ, ಶಿವಕುಮಾರ್‌ ಮುಖ್ಯಮಂತ್ರಿಯಾಗಲು ಶಕ್ತಿ ಬರುತ್ತದೆ. ಕಾಂಗ್ರೆಸ್‌ ಕಾರ್ಯಕರ್ತರು ಈ ಕಾರಣದಿಂದಾಗಿ ಯೋಗೇಶ್ವರ್‌ ಅವರು ಹೆಚ್ಚು ಮತಗಳ ಅಂತರದಿಂದ ಗೆಲ್ಲುವಂತೆ ಶ್ರಮಿಸಬೇಕು ಎಂದರು.

ನಿಮ್ಮ ಜಿಲ್ಲೆಯವರೇ ಸಿಎಂ ಆಗುತ್ತಾರೆ
ಇನ್ನು ಕೋಡಂಬಹಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ನಿಮ್ಮ ಜಿಲ್ಲೆಯವರೇ ಸಿಎಂ ಆಗುತ್ತಾರೆ, ಈ ಚುನಾವಣೆ ಫಲಿತಾಂಶ ಅದನ್ನು ತೋರಿಸುತ್ತದೆ. ರಾಜ್ಯ ರಾಜಕಾರಣದ ತಿರುವು ಇಲ್ಲಿಂದಲೇ ಪ್ರಾರಂಭವಾಗುತ್ತದೆ ಎಂದು ಹೇಳುವ ಮೂಲಕ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಾರೆ ಎಂದು ಪ್ರಸ್ತಾವಿಸಿದ್ದಾರೆ.

Advertisement

ಒಂದು ಕಾಲದ ಎಚ್‌ಡಿಕೆ ಆಪ್ತರಿಂದಲೇ ಹೇಳಿಕೆ
ಚನ್ನಪಟ್ಟಣದಲ್ಲಿ ಡಿ.ಕೆ. ಶಿವಕುಮಾರ್‌ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿರುವ ಎಲ್ಲ ಮುಖಂಡರು ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒಂದು ಕಾಲದಲ್ಲಿ ಓಡಾಡುತ್ತಿದ್ದವರೇ ಆಗಿದ್ದಾರೆ. ಪುಟ್ಟಣ್ಣ, ಶಿವಲಿಂಗೇಗೌಡ, ಎಂ.ಸಿ. ಅಶ್ವತ್ಥ್ ಈ ಮೊದಲು ಜೆಡಿಎಸ್‌ನಲ್ಲಿದ್ದು, ಬಳಿಕ ಕಾಂಗ್ರೆಸ್‌ಗೆ ಬಂದಿರುವವರು ಎಂಬುದು ವಿಶೇಷ.

ಒಕ್ಕಲಿಗ ಮತ ಸೆಳೆಯಲು ಕಾಂಗ್ರೆಸ್‌ ತಂತ್ರಗಾರಿಕೆ?
ಉಪಚುನಾವಣೆಯಲ್ಲಿ ಜಾತಿ ಸಮೀಕರಣ ಆರಂಭವಾಗಿದೆ. ಅಹಿಂದ ಮತಗಳು ಕಾಂಗ್ರೆಸ್‌ ಪರವಾಗಿವೆ. ಆದರೆ ಕ್ಷೇತ್ರದಲ್ಲಿ ಪ್ರಬಲ ಕೋಮು ಎನಿಸಿರುವ ಒಕ್ಕಲಿಗ ಮತದಾರರು ಜೆಡಿಎಸ್‌ ಪಾಳಯದ ಮತಬ್ಯಾಂಕ್‌ ಆಗಿವೆ. ಹಳೇ ಮೈಸೂರ ಭಾಗದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆಲ್ಲಲು ಒಕ್ಕಲಿಗ ಮತಗಳು ಚಲಾವಣೆಗೊಳ್ಳಲು ಮುಖ್ಯಕಾರಣ. ನಾನು ಒಕ್ಕಲಿಗ, ನಾನು ಸಿಎಂ ಆಗುತ್ತೇನೆ, ನನ್ನ ಕೈಗೂ ಪೆನ್ನು ನೀಡಿ ಎಂದು ಡಿ.ಕೆ. ಶಿವಕುಮಾರ್‌ ಪ್ರಚಾರ ಮಾಡಿದ್ದರು. ಈ ಉಪಚುನಾವಣೆಯಲ್ಲಿ ಒಕ್ಕಲಿಗರ ಮತ ಸೆಳೆಯಲು ಮತ್ತೆ ಡಿಕೆಶಿ ಸಿಎಂ ಎಂಬ ಅಸ್ತ್ರವನ್ನು ಬಳಸಲಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next