Advertisement

ಕಾಂಗ್ರೆಸ್‌ ಪಕ್ಷವನ್ನು ಮಾಸ್‌ ಅಲ್ಲ ಕೇಡರ್‌ ಬೇಸ್‌ ಪಕ್ಷವಾಗಿ ಕಟ್ಟುತ್ತೇವೆ: ಡಿಕೆಶಿ

10:19 AM Mar 17, 2020 | sudhir |

ಬೆಂಗಳೂರು: ಕಾಂಗ್ರೆಸ್‌ ಪಕ್ಷವನ್ನು ಮಾಸ್‌ ಬೇಸ್‌ ಪಕ್ಷವಾಗಿ ಕಟ್ಟದೆ ಕೇಡರ್‌ ಬೇಸ್‌ ಪಕ್ಷವಾಗಿ ಕಟ್ಟುವುದಾಗಿ ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

ರೇಸ್‌ ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನದಲ್ಲಿ ಮೂವರು ಕಾರ್ಯಾಧ್ಯಕ್ಷರೊಂದಿಗೆ ಮೊದಲ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಹೈಕಮಾಂಡ್‌ ಹಲವು ಗೊಂದಲಕ್ಕೆ ತೆರೆ ಎಳೆದಿದೆ. ವಿಶ್ವಾಸವಿಟ್ಟು ನಮ್ಮ ಜೊತೆ ಮೂವರು ಕಾರ್ಯಾಧ್ಯಕ್ಷರನ್ನ ಕೊಟ್ಟಿದೆ. ಹೊಸ ತಂಡವನ್ನೇ ಕೊಟ್ಟು ಜವಾಬ್ದಾರಿ ವಹಿಸಿದೆ. ಅಧಿಕಾರ ಅನ್ನುವುದನ್ನು ಬಿಟ್ಟು ಕೆಲಸ ಮಾಡಬೇಕಿದೆ ಎಂದರು.

ಹೈಕಮಾಂಡ್‌ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಮುಖಂಡರಾದ ಪ್ರಿಯಾಂಕಾ ಗಾಂಧಿ ಮತ್ತಿತರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಧಾನಸಭೆ ಅಧಿವೇಶನದ ಬಳಿಕ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಅಧಿಕೃತವಾಗಿ ಸ್ವೀಕರಿಸುತ್ತೇನೆ. ಸದ್ಯಕ್ಕೆ ದೆಹಲಿಗೆ ತೆರಳುವ ಯೋಚನೆ ಇಲ್ಲ.

ಮೂವರು ಕಾರ್ಯಾಧ್ಯಕ್ಷರು, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಇತರೆ 15ರಿಂದ 20 ಮುಖಂಡರ ಜೊತೆ ತೆರಳಿ ರಾಷ್ಟ್ರೀಯ ನಾಯಕರನ್ನು ಅಭಿನಂದಿಸುತ್ತೇನೆ ಎಂದರು.

ಜಾತಿ, ನೀತಿ ಮೇಲೆ ನಾನು ಮಾತನಾಡುವುದಿಲ್ಲ ಎಲ್ಲ ಸಮುದಾಯಗಳ ಬಗ್ಗೆಯೂ ಒತ್ತು ನೀಡುತ್ತೇವೆ. ನಮಗೆ ಸಂಖ್ಯೆ ಮುಖ್ಯ ಅಲ್ಲ. ಗುಣಮಟ್ಟ ಬೇಕಿದೆ. ಶಿಸ್ತು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.

Advertisement

ಬಿಜೆಪಿ ವಿರುದ್ಧ ಆಕ್ರೋಶ
ನನಗೆ ಅಧ್ಯಕ್ಷನಾಗಬೇಕೆಂಬ ಆಸೆಯಿರಲಿಲ್ಲ. ಕಾರ್ಯಕರ್ತರು, ಮುಖಂಡರ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಿದೆ. ಜನರು ಬಿಜೆಪಿಗೆ ಸಾಕಷ್ಟು ಅಧಿಕಾರ ಕೊಟ್ಟಿದ್ದಾರೆ. ಅವರು ಒಂದೊಂದೇ ರಾಜ್ಯದ ಅಧಿಕಾರ ಕಿತ್ತುಕೊಳ್ಳುತ್ತಿದ್ದಾರೆ.

ಬಿಜೆಪಿಯವರಿಗೆ ನಾನು ಹೇಳ್ಳೋದಿಷ್ಟೇ. ನಮ್ಮ ಪಕ್ಷ ಮಾತ್ರ ದೇಶವನ್ನು ಉಳಿಸುವುದು. ಇದನ್ನ ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್‌ ಎಂದಿಗೂ ದೇಶದಿಂದ ಮುಕ್ತವಾಗುವುದಿಲ್ಲ. ಗಾಂಧಿ ಕುಟುಂಬವೂ ನಾಶವಾಗುವುದಿಲ್ಲ. ಗಾಂಧಿ ಕುಟುಂಬ ತ್ಯಾಗ ಮಾಡಿ ಈ ದೇಶ ಉಳಿಸುತ್ತಿದೆ. ಇದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ಆರೋಪ ಮಾಡುವುದಿಲ್ಲ
ಕೊರೋನಾ ಮಹಾಮಾರಿ ದೇಶಕ್ಕೆ ಬಂದಿದೆ. ಕೇಂದ್ರ ಸರ್ಕಾರದ ಮೇಲೆ ಯಾವುದೇ ಆರೋಪ ಮಾಡುವುದಿಲ್ಲ. ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಕೊಡುತ್ತೇವೆ. ಕೇಂದ್ರ ಹಾಗು ರಾಜ್ಯ ಬಿಜೆಪಿ ಸರಕಾರ ಇದನ್ನು ತಮ್ಮ ರಾಜಕೀಯ ಮೇಲಾಟಕ್ಕೆ ಬಳಸಿಕೊಳ್ಳಬಾರದು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next