ವಿಧಾನಸಭೆ: “ರಾಜಕೀಯದಲ್ಲಿ ಯಾವ ಸ್ಥಾನಮಾನಗಳು ಶಾಶ್ವತವಲ್ಲ, ಇಲ್ಲಿ ಏನು ಬೇಕಾದರೂ ಆಗಬಹುದು. ಶತ್ರುವಿನ ಶತ್ರು ಮಿತ್ರನಾಗುತ್ತಾನೆ. ರಾಜಕೀಯ ಒಂದು ಉತ್ತಮ ಕಲೆಯಷ್ಟೆ. ಹೀಗಾಗಿ ಯಾರು ಬೇಕಾದರೂ ಯಾವ ಸ್ಥಾನದಲ್ಲಿ ಯಾವಾಗ ಬೇಕಾದರೂ ಕುಳಿತುಕೊಳ್ಳಬಹುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಆಡಿದ ಮಾತುಗಳು ಹಲವು ರಾಜಕೀಯ ಊಹಾಪೋಹಗಳಿಗೆ ಕಾರಣವಾದವು.
ವಿಧಾನಸಭೆ ಕಲಾಪದಲ್ಲಿ ಗುರುವಾರ ಉಪಸಭಾಧ್ಯಕ್ಷರ ಆಯ್ಕೆ ವೇಳೆ ಅಭಿನಂದನಾ ಮಾತುಗಳನ್ನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ರಾಜಕಾರಣದಲ್ಲಿ ಏಳು ಬೀಳು ಸಾಮಾನ್ಯ. ಆದರೆ ಯಾವುದು ಶಾಶ್ವತವಲ್ಲ. ರಾಜಕೀಯ ಒಂದು ಉತ್ತಮ ಕಲೆ ಎನ್ನಬಹುದು.
ಇಲ್ಲಿ ಶತ್ರುವಿನ ಶತ್ರು ಮಿತ್ರನಾಗಿರುತ್ತಾನೆ. ಚುನಾವಣೆ ವರೆಗೆ ಒಂದಿರುತ್ತದೆ, ಆ ಮೇಲೆ ಮುಂದೆನಾಗುತ್ತದೆಯೋ ಗೊತ್ತಿಲ್ಲ ಎಂದು ಹೇಳಿದ ಮಾತುಗಳಿಗೆ ಬಿಜೆಪಿ ಪಾಳೆಯದ ಕೆಲ ಸದಸ್ಯರು ಡಿಕೆಶಿ ಅವರಿಗೆ ಪ್ರೋತ್ಸಾಹಿತ ಮಾತುಗಳನ್ನಾಡಿ ಕಾಲೆಳೆದರು.
ಕೂಡಲೇ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮೊದಲು ರಾಜಕಾರಣದಲ್ಲಿ ಕಾದು ನೋಡಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈಗಿನ ರಾಜಕಾರಣದಲ್ಲಿ ಅಂತಹ ವಾತಾವರಣ ಉಳಿದಿಲ್ಲ. ಈಗ ಅವಕಾಶ ಸಿಕ್ಕಾಗ ಯಾವ ರೀತಿಯಿಂದಲಾದರೂ ಸರಿ ಅಧಿಕಾರ ಪಡೆದುಕೊಳ್ಳುವ ಘಟನೆಗಳು ನಮ್ಮ ಅಕ್ಕಪಕ್ಕದ ರಾಜ್ಯದಲ್ಲಿ ನಡೆದಿವೆ. ಅಧಿಕಾರ ಯಾರಿಗೂ ಕಾಯುವುದಿಲ್ಲ. ನಾವೇ ಅದನ್ನು ಪಡೆದುಕೊಳ್ಳಬೇಕು ಎಂದರು.
ಡಿಕೆಶಿ ಅವರು ಕೊಟ್ಟ ಕುದುರೆಯನ್ನು ಚೆನ್ನಾಗಿ ಏರುವ ಸಾಮಾರ್ಥಯ ಹೊಂದಿದ್ದಾರೆ. ರಾಜಕಾರಣದಲ್ಲಿ ಯಾವುದು ಶಾಶ್ವತವಲ್ಲ. ಆದರೆ ಬದಲಾವಣೆ ಮಾತ್ರ ಶಾಶ್ವತವಾಗಿದೆ. ಬರುವಂತ ದಿನಗಳಲ್ಲಿ ಅಂತಹ ಬದಲಾವಣೆಗೆ ಉಪ ಸಭಾಧ್ಯಕ್ಷರು ಸಾಕ್ಷಿಯಾಗಬಹುದು ಎಂದು ಮಹಾರಾಷ್ಟ್ರದ ಪವಾರ್ ಪಾಲಿಟಿಕ್ಸ್ ಅನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸದ ಡಿಕೆಶಿ ಮುಗುಳ್ನಗುತ್ತಲೇ, ನಾನು ಇನ್ನೊಮ್ಮೆ ರಾಜಕಾರಣವನ್ನು ಮಾತನಾಡುತ್ತೇನೆ. ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಭಾಗಿಯಾಗಬೇಕಿದೆ ಎಂದರು. ಕೂಡಲೇ ಬೊಮ್ಮಾಯಿ, ನಿಮಗೆ ಈ ಕಡೆಯವರ ಬೆಂಬಲವೇ ಅಧಿಕವಾಗಿದೆ ಚಿಂತಿಸಬೇಡಿ ಎಂದರು. ಅಷ್ಟೇಯಲ್ಲ, ಬಿಜೆಪಿ ಸದಸ್ಯರು ಆಗಲಿ ಆಗಲಿ ಎಂದು ಬಹುಪರಾಕ್ ಹೇಳಿದರು.