Advertisement

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

06:57 PM Mar 27, 2024 | Team Udayavani |

ಕುಮಟಾ: ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ ಎಂದು ನಂಬಿದವರು ನಾವು. ಧರ್ಮ ಯಾರ ಮನೆಯ ಆಸ್ತಿಯಲ್ಲ. ಕೆಲವರು ಧರ್ಮ, ದೇವರನ್ನ ರಾಜಕೀಯಕ್ಕೆ ಬಳಸುತ್ತಿದ್ದಾರೆ, ಇದು ಅಕ್ಷಮ್ಯ ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

Advertisement

ಪಟ್ಟಣದ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು. ಚುನಾವಣೆಯೆಂಬ ಧರ್ಮಯುದ್ಧಕ್ಕೆ ಕುಮಟಾದಿಂದಲೇ ಚಾಲನೆ ನೀಡುತ್ತಿದ್ದೇನೆ ಎಂದರು.

ರಾಜಕೀಯದಲ್ಲಿ ಅಸಾಧ್ಯ ಎಂಬ ಪದವೇ ಇಲ್ಲ. ರಾಜಕಾರಣ ಸಾಧ್ಯತೆಗಳ ಆಗರ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡೋ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಕಳೆದ ಚುನಾವಣೆಯಲ್ಲೇ ಹೇಳಿದ್ದೆ. ಬಸವಣ್ಣನ ನಾಡಿನ ನಾವು ನುಡಿದಂತೆ ನಡೆದಿದ್ದೇವೆ. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಗಿದೆ. ಇದೇ ನಿಮ್ಮ ದೊಡ್ಡ ಅಸ್ತ್ರ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ನಮ್ಮ ಸರ್ಕಾರ ತಂದ ಗ್ಯಾರಂಟಿ ಯೋಜನೆಗಳು ದೇಶದಲ್ಲಿ ಎಲ್ಲೂ ಇಲ್ಲ. ಅಂದು ಈ ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗತ್ತದೆಂದಿದ್ದ ಪ್ರಧಾನಿ ಮೋದಿ, ನಮ್ಮದನ್ನೇ ನಕಲು ಮಾಡಿ ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಇಡೀ ದೇಶದಲ್ಲೇ ಸದ್ದಾಗಿದೆ. ವಿದ್ಯಾವಂತ, ಬುದ್ದಿವಂತ, ಪ್ರಜ್ಞಾವಂತ ಡಾ.ಅಂಜಲಿ ಸಂಸತ್ ನಲ್ಲಿ ಜಿಲ್ಲೆಯ ಧ್ವನಿಯನ್ನ ಬಿಂಬಿಸುತ್ತಾರೆ. ವಿಜಯದ ಕೀರ್ತಿ ಅವರ ಪಾಲಿಗೆ ನೀಡಿ, ಮನೆಮಗಳಂತೆ ಆಶೀರ್ವದಿಸಿ ಅವರನ್ನ ಸಂಸತ್ ಗೆ ಕಳುಹಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಯಾವ ಗೊಂದಲವೂ ಇಲ್ಲದ ನಾಯಕಿಯನ್ನ ನಮ್ಮ ನಾಯಕರು ಜಿಲ್ಲೆಯ ಅಭ್ಯರ್ಥಿಯನ್ನಾಗಿ ನೀಡಿದ್ದಾರೆ. ಜಿಲ್ಲೆಯಿಂದ ಸಂಸದರಾಗಲು ಕಿತ್ತೂರು, ಖಾನಾಪುರ ಕ್ಷೇತ್ರ ಬೇಕೇ ಬೇಕು. ಅಲ್ಲಿಯವರಿಗೆ ಇನ್ನೂ ಅವಕಾಶ ನೀಡಿರಲಿಲ್ಲ, ಈ ಬಾರಿ ನೀಡಿದ್ದಾರೆ. ಬಿಜೆಪಿಯವರು ಹುಟ್ಟಿಸುವ ಗೊಂದಲಕ್ಕೆ ತಲೆಕೆಡಿಸಿಕೊಳ್ಳಬೇಡಿ. ಸುಳ್ಳೇ ಅವರ ಬಂಡವಾಳ. ಬಿಜೆಪಿಯ ಸಂಸದರು ಜಿಲ್ಲೆಯ ಸಮಸ್ಯೆಗಳನ್ನ ಒಂದೇ ಒಂದು ದಿನ ಸಂಸತ್ ಗೆ ಮುಟ್ಟಿಸುವ ಕೆಲಸ ಮಾಡಿಲ್ಲ. ಒಂದೇ ಒಂದು ದಿನ ಜಿಲ್ಲೆಯ ಬಗ್ಗೆ ಏನನ್ನೂ ಕೇಳಿಲ್ಲ. ಹಾಗಂತ ಮಾಡಬಾರದ್ದು ಮಾಡಿದ್ದಾರೆ. ಅರಣ್ಯ ಅತಿಕ್ರಮಣ, ರಾಷ್ಟ್ರೀಯ ಹೆದ್ದಾರಿ, ಕೊಂಕಣ ರೈಲ್ವೆ, ನೌಕಾನೆಲೆ, ಕೈಗಾ ಅಣು ವಿದ್ಯುತ್ ಸ್ಥಾವರ ಹೀಗೆ ಬೇಕಾದಷ್ಟು ಜಿಲ್ಲೆಯ ಸಮಸ್ಯೆಗಳಿವೆ. ಇವೆಲ್ಲದಕ್ಕೂ ಉತ್ತರ, ಪರಿಹಾರ ಸಿಗಬೇಕೆಂದರೆ ನಮ್ಮ ಅಭ್ಯರ್ಥಿ ಡಾ.ಅಂಜಲಿ ಸಂಸತ್ ನಲ್ಲಿ ಮಾತನಾಡಬೇಕಿದೆ. ಹೀಗಾಗಿ ಮಾತನಾಡುವ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದ್ದೇವೆ. ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆಂಬ ಭರವಸೆ ನಮಗಿದೆ ಎಂದರು.

Advertisement

ಕಳೆದ ವಿಧಾನಸಭಾ ಚುನಾವಣೆಯ ಪೂರ್ವ ಕಾರ್ಡ್ ನಲ್ಲಿದ್ದ ಗ್ಯಾರಂಟಿ ಈಗ ಫಲಾನುಭವಿಗಳ ಖಾತೆಯಲ್ಲಿದೆ‌. ಯೋಜನೆಗಳನ್ನ ಸಮರ್ಪಕವಾಗಿ ಜನರಿಗೆ ಮುಟ್ಟಿಸಿದ್ದೇವೆ. ಅಭಿವೃದ್ಧಿ ಕೂಡ ಮಾಡಿದ್ದೇವೆ. ಶಿಕ್ಷಣಕ್ಕೆ ಕೊರತೆಯಾಗಿಲ್ಲ. ಸಾಮಾನ್ಯಜನ ನೆಮ್ಮದಿಯಿಂದ ಬದುಕಿತ್ತಿದ್ದಾರೆ. ಇದಕ್ಕಿಂತ ಬೇರೆ ಇನ್ನೇನು ಬೇಕಿದೆ ಎಂದ ಅವರು, ೩೦ ವರ್ಷ ಈಗಾಗಲೇ ಕಳೆದುಕೊಂಡಿದ್ದೇವೆ. ರಾಜ್ಯದಿಂದ ಯಾವುದೇ ಕೊರತೆಯಾಗದಂತೆ ಒಟ್ಟಾಗಿ ನಾವು ಅಭಿವೃದ್ಧಿ ಮಾಡುತ್ತಿದ್ದೇವೆ. ಆದರೆ ಇನ್ನಿತರ ಜಿಲ್ಲೆಗೆ ಸಂಬಂಧಿಸಿದ ಕೇಂದ್ರದ ಸಮಸ್ಯೆಗಳನ್ನ ಸರಿಪಡಿಸಲೆಂದೇ ಪಕ್ಷ ಸಮರ್ಥ ಅಭ್ಯರ್ಥಿಯನ್ನ ಆಯ್ಕೆ ಮಾಡಿದೆ. ನಾವು ಹೇಳಿದ್ದನ್ನ ಮಾಡಿದ್ದೇವೆ. ಒಟ್ಟಾಗಿ ಸೇರಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸೋಣ ಎಂದು ಕರೆನೀಡಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಮಾತನಾಡಿ, ಈ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನದ್ದಲ್ಲ. ಈ ಚುನಾವಣೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ನಡುವಿನದ್ದಲ್ಲ. ಈ ಚುನಾವಣೆ ರಾಹುಲ್- ಮೋದಿ ನಡುವಿನದ್ದಲ್ಲ. ಇದು ಬಡವರು, ಹಿಂದುಳಿದ ವರ್ಗದ ಜನರ ಚುನಾವಣೆ. ಬಿಜೆಪಿ ಆಡಳಿತದಲ್ಲಿ ಬಡವರು ಇನ್ನೂ ಬಡವರಾಗುತ್ತಿದ್ದಾರೆ, ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. ಯುವಜನರಿಗೆ ಕೆಲಸ ಸಿಗಬೇಕು, ಮಹಿಳೆಯರು ಸಬಲೀಕರಣ ಆಗಬೇಕೆಂಬ ಉದ್ದೇಶದಡಿ ಈ ಚುನಾವಣೆ ನಡೆಯುತ್ತಿದೆ. ಬಡವರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಬೇಕಿದೆ. ಸಿಎಂ, ಡಿಸಿಎಂ ನೇತೃತ್ವದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿ ನುಡಿದಂತೆ ನಡೆದ ಸರ್ಕಾರ ನಮ್ಮದು. ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಗ್ಯಾರಂಟಿ ಸಹಾಯಧನಗಳಿಂದ ತಾಯಂದಿರು ಖುಷಿಯಾಗಿದ್ದಾರೆ.ಮನೆ ಯಜಮಾನನ ದುಡ್ಡೂ ಉಳಿಯುತ್ತಿದೆ. ಹೆಣ್ಣುಮಕ್ಕಳಿಗೆ ಮಾನ, ಸಮ್ಮಾನ ಸಿಕ್ಕಿರೋದು ಕಾಂಗ್ರೆಸ್ ನಿಂದ. ಐದು ವರ್ಷ ಕಾಡುಪ್ರದೇಶ ಖಾನಾಪುರದ ಸೇವೆ ಮಾಡಿದ್ದೇನೆ. ನನ್ನ ಮೇಲೆ ವಿಶ್ವಾಸವಿಡಿ, ಪಕ್ಷದ ಮೇಲೆ ವಿಶ್ವಾಸವಿಟ್ಟು ಎಂಟೂ ಕ್ಷೇತ್ರದಲ್ಲಿ ನನ್ನನ್ನ ಜಿಲ್ಲೆಯ ಮಗಳಂತೆ ನೋಡಿ ಆಶೀರ್ವಾದ ಮಾಡಿ ಎಂದು ಕೋರಿದರು.

ಕೆಪಿಸಿಸಿ ವಕ್ತಾರ ಸುಧೀರ್ ಮೊರಳ್ಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್ ಸೇರಿ ಮುಂತಾದವರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಸನ್ಮಾನಿಸಲಾಯಿತು.

ಕಾರವಾರ ಶಾಸಕ ಸತೀಶ್ ಸೈಲ್, ಮಾಜಿ ಶಾಸಕ ವಿ.ಎಸ್.ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ಕಾಂಗ್ರೆಸ್ ಧುರೀಣರಾದ ಯಶೋಧರ ನಾಯ್ಕ, ರಮಾನಂದ ನಾಯಕ ಮುಂತಾದವರಿದ್ದರು.

ಇದನ್ನೂ ಓದಿ: Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next