ಗೋಕರ್ಣ : ಜಾತ್ಯಾತೀತತೆ ಎಂದು ಹೇಳಿಕೊಳ್ಳುವ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ತನ್ನ ಎಲ್ಲಾ ತತ್ವ ಸಿದ್ಧಾಂತಗಳನ್ನು ಮೂಲೆಗುಂಪು ಮಾಡಿದ ಈ ಪಕ್ಷ ಸರ್ವನಾಶವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಲೋಕಸಭಾ ಚುನಾವಣೆಯ ನಿಮಿತ್ತ ರಾಜ್ಯದ ನಾನಾ ದೇವಾಲಯಗಳಿಗೆ ಭೇಟಿ ನೀಡಿ ಬುಧವಾರ ಗೋಕರ್ಣದ ಶ್ರೀ ಮಹಾಗಣಪತಿ ಹಾಗೂ ಶ್ರೀ ಮಹಾಬಲೇಶ್ವರ ದೇವರ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಅರ್ಚಕರು ಪೂಜೆಯ ಸಂದರ್ಭದಲ್ಲಿ ಸಂಕಲ್ಪ ಮಾಡಿದ್ದಾರೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಅವರು ಮಾತನಾಡ ಅರ್ಚಕರು ಹೇಳುವುದರಲ್ಲಿ ತಪ್ಪೇನಿಲ್ಲ. ಅವರಿಗೂ ಆಸೆಯಿರುತ್ತದೆ. ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ನಾಯಕತ್ವದಲ್ಲಿ ನಾವು ಮುಂದೆ ಹೋಗುತ್ತಿದ್ದೇವೆ. ಕೆಲವರು ನನ್ನನ್ನು ಸಿಎಂ ಆಗಲಿ ಎಂದು ಹೇಳುತ್ತಾರೆ. ಅವರ ಬಾಯಲ್ಲಿ ಬರುವುದನ್ನು ತಪ್ಪಿಸಲು ಸಾಧ್ಯವೇ? ಯಾರು ಏನೇ ಆಸೆಪಟ್ಟರೂ ಪಕ್ಷ ಅಂತಿಮವಾಗಿ ತೀರ್ಮಾನಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ ಎಂಬುದಾಗಿ ಪ್ರಾರ್ಥಿಸಿಕೊಂಡಿದ್ದೇನೆ ಎಂದರು.
ರಾಜ್ಯದಲ್ಲಿ ಹಿಂದುತ್ವ, ರಾಮನ, ಬಿಜೆಪಿ ಗಾಳಿಯೂ ಇಲ್ಲ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಗ್ಯಾರಂಟಿ ಅನ್ನುವ ಬದಲು ಮೋದಿ ಗ್ಯಾರಂಟಿ ಅನ್ನುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಅನ್ನುವುದನ್ನು ಕಟ್ ಮಾಡಿ ಮೋದಿ ಗ್ಯಾರಂಟಿ ಮಾಡಿಕೊಂಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಯಾರಾದರೂ ಪಕ್ಷದ ಸಿದ್ಧಾಂತ ಒಪ್ಪಿ ಕೆಲಸ ಮಾಡುವುದಾದರೆ ಅವರಿಗೆ ಸ್ವಾಗತ. ಯಾರೂ ಅವರಿಗೆ ವಿರೋಧ ಮಾಡುವಂತಿಲ್ಲ. ಪಕ್ಷ ತೀರ್ಮಾನ ಮಾಡಿದ ನಂತರ ಯಾರೂ ಅದಕ್ಕೆ ವಿರೋಧವಾಗಿ ನಡೆದುಕೊಳ್ಳುವಂತಿಲ್ಲ ಎಂದು ಹೇಳಿದರು.
ಮಹಾಬಲೇಶ್ವರನಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕವನ್ನು ಮಾಡಿಸಿದ್ದಾರೆ. ಹಾಗೆ ನಾ ಗಣಪತಿಗೆ ಜಲ ಅಭಿಷೇಕ ಮಾಡಿದರು. ಹತ್ತು ಅರ್ಚಕರಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್. ಕಾಂಗ್ರೆಸ್ ಮುಖಂಡರಾದ ಜಿ. ಟಿ. ನಾಯ್ಕ, ನಿವೇದಿತ್ ಅಳ್ವಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು ನಂತರ ಮೈಸೂರಿನ ಪ್ರಯಾಣ ಬೆಳೆಸಿದರು.
ಇದನ್ನೂ ಓದಿ: Viral Video… ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕನಿಗೆ ಪಾಠ ಕಲಿಸಿದ ವಿದ್ಯಾರ್ಥಿಗಳು…