ಬಳ್ಳಾರಿ: ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ. ಎಸ್.ಉಗ್ರಪ್ಪ ಪರ ಜಿಲ್ಲೆಯ ಸಂಡೂರಿನಲ್ಲಿ ಪ್ರಚಾರ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಮೀಪದ ದೇವರಕೊಳ್ಳ ಗ್ರಾಮದ ಬಳಿಯ ಬೆಟ್ಟದಲ್ಲಿರುವ ಅನ್ನಪೂರ್ಣೇಶ್ವರಿ ದೇಗುಲಕ್ಕೆ ಭೇಟಿ ನೀಡಿ, ಸ್ವಾಮೀಜಿ ಗಳಿಂದ ಶುಕ್ರವಾರ ಆಶೀರ್ವಾದ ಪಡೆದರು. ದೇವಸ್ಥಾನದ ನಾಗಾಸಾಧು ದಿಗಂಬರ ರಾಜ ಭಾರತಿ ಸ್ವಾಮೀಜಿಗಳು ನಡೆಸುತ್ತಿದ್ದ ಹೋಮದ ಮುಂದೆ ಕೆಲಹೊತ್ತು ಡಿ.ಕೆ.ಶಿವಕುಮಾರ್ ಕುಳಿತು ಕೊಂಡರು. ಬೆಟ್ಟದ ಸುಮಾರು 200ಕ್ಕೂ ಹೆಚ್ಚು ಮೆಟ್ಟಿಲು ಹತ್ತಿದ ಪರಿಣಾಮ ತುಂಬಾ ಆಯಾಸಗೊಂಡಿದ್ದ ಸಚಿವರು ಸ್ವಾಮೀಜಿ ಎದುರು ಕುಳಿತು ದಣಿವಾರಿಸಿ ಕೊಂಡರು. ಸಚಿವರು ತಮ್ಮ ಮುಂದೆ ಕುಳಿತುಕೊಳ್ಳುತ್ತಿದ್ದಂತೆಯೇ ನಾಗಾಸಾಧು ಸಚಿವರ ಹಣೆಗೆ ಅಂಗಾರಕ ಹಚ್ಚಿದರು. ದಶಕದಿಂದಲೇ ಈ ಬೆಟ್ಟದಲ್ಲಿ ನಾಗಾಸಾಧು ನೆಲೆಸಿದ್ದಾರೆ. ಲೋಹ್ಯಾದ್ರಿ ಪರ್ವತ ಶೃಂಗದಲ್ಲಿ ನೆಲೆ ನಿಂತಿರುವ ಈ ನಾಗಾಸಾಧು ರಾಜಭಾರತಿ ತಾತನವರು ವರ್ಷದ ಆರು ತಿಂಗಳಕಾಲ ಮೌನವ್ರತ ದಲ್ಲಿರುತ್ತಾರೆ. ನವೆಂಬರ್ 23ಕ್ಕೆ ಮೌನ ವ್ರತಾಚರಣೆ ಮುಕ್ತಾಯಗೊಳ್ಳಲಿದೆ ಎಂದು ದೇಗುಲದ ಅರ್ಚಕರು ತಿಳಿಸಿ ದ್ದಾರೆ. ಉಪಚುನಾವಣೆ ಹಿನ್ನೆಲೆಯಲ್ಲಿ, ಸಚಿವ ಡಿ.ಕೆ.ಶಿವಕುಮಾರ್ ದಿಢೀರ್ ನಾಗಾಸಾಧು ಭೇಟಿಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.