Advertisement

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

03:56 PM Jun 19, 2024 | Team Udayavani |

ಬೆಂಗಳೂರು: “ಉಪಚುನಾವಣೆಯಲ್ಲಿ ಚನ್ನಪಟ್ಟಣದ ಜನ ನನ್ನ ಮೇಲೆ ಒಲವು ತೋರಿದರೆ, ಪಕ್ಷ ತೀರ್ಮಾನಿಸಿದರೆ ನಾನು ಸ್ಪರ್ಧೆ ಮಾಡದೇ ಬೇರೆ ವಿಧಿ ಇಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

Advertisement

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು “ಚನ್ನಪಟ್ಟಣ ನನ್ನ ಹೃದಯದಲ್ಲಿದೆ. ಇದು ಈ ಹಿಂದೆ ಸಾತನೂರು ವಿಧಾನಸಭಾ ಕ್ಷೇತ್ರದ ಭಾಗವಾಗಿತ್ತು. ಆಮೂಲಕ ಈ ಭಾಗ ನನಗೆ ರಾಜಕೀಯವಾಗಿ ಜನ್ಮ ನೀಡಿದ ಸ್ಥಳ. ಈ ಭಾಗದ ಜನ ಕಷ್ಟಕಾಲದಲ್ಲಿ ನಮಗೆ ಹೆಚ್ಚಿನ ಮತ ನೀಡಿ ಬೆಂಬಲ ನೀಡಿದ್ದಾರೆ. ನಾನು ಅವರ ಋಣ ತೀರಿಸಬೇಕು. ಕನಕಪುರ ಯಾವ ರೀತಿ ಅಭಿವೃದ್ಧಿ ಮಾಡಿದ್ದೇನೋ ಅದಕ್ಕಿಂತ ಹೆಚ್ಚಿನ ಅಭಿವೃದ್ಧಿಗೆ ಅವಕಾಶವಿದೆ. ಹೀಗಾಗಿ ಈ ಕ್ಷೇತ್ರದ ಮೇಲೆ ನನಗೆ ವಿಶೇಷವಾದ ಕಾಳಜಿ ಇದೆ. ಚನ್ನಪಟ್ಟಣ ಅಭಿವೃದ್ಧಿ ಹಾಗು ಬದಲಾವಣೆಗೆ ನಾನು ಬದ್ಧವಾಗಿದ್ದೇನೆ. ಹೀಗಾಗಿ ಇಂದು ಅಲ್ಲಿನ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಮತದಾರರು ಹಾಗು ನಾಯಕರ ಜತೆ ಮಾತನಾಡುತ್ತೇನೆ. ಅಲ್ಲಿನ ಜನ ಏನು ಹೇಳುತ್ತಾರೆ ಎಂದು ತಿಳಿದು ನಂತರ ತೀರ್ಮಾನ ಮಾಡುತ್ತೇನೆ” ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ಸಹೋದರ ಸುರೇಶ್ ಅವರ ಸ್ಪರ್ಧೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಇನ್ನು ತೀರ್ಮಾನವಾಗಿಲ್ಲ. ನನಗೆ ಮತ ನೀಡಿ ಎಂದು ನಾನು ಅಲ್ಲಿನ ಮತದಾರರಿಗೆ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ಅಧಿಕಾರಿಗಳ ಪರಿಶೀಲನೆ ನಂತರ ನೀರಿನ ದರ ಏರಿಕೆ ತೀರ್ಮಾನ:
ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಪರಿಣಾಮ ಜಲ ಮಂಡಳಿ ದೊಡ್ಡ ನಷ್ಟಕ್ಕೆ ಸಿಲುಕಿದೆ. ಬಿಡಬ್ಲ್ಯೂ ಎಸ್ ಎಸ್ ಬಿಗೆ ಆರ್ಥಿಕ ನೆರವು ನೀಡಲು ಯಾವುದೇ ಬ್ಯಾಂಕ್ ಗಳು ಮುಂದೆ ಬರುತ್ತಿಲ್ಲ. ಸಧ್ಯದಲ್ಲೇ ಕಾವೇರಿ ಐದನೇ ಹಂತದ ಯೋಜನೆ ಪೂರ್ಣಗೊಳ್ಳುತ್ತಿದೆ.

ಪ್ರತಿ ವರ್ಷ ನಷ್ಟ ಎದುರಾಗುತ್ತಿರುವುದರಿಂದ ಪರಿಹಾರದ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ. ವಿಶ್ವ ಬ್ಯಾಂಕ್ ಸೇರಿದಂತೆ ಎಲ್ಲಾ ಸಂಸ್ಥೆಗಳು ಮಂಡಳಿ ನಷ್ಟದಿಂದ ಮೇಲೆ ಬರುವ ಪರ್ಯಾಯ ವಿಧಾನವನ್ನು ಕೇಳುತ್ತಿವೆ.

Advertisement

ಕಾವೇರಿಯ 6 ಟಿಎಂಸಿ ನೀರನ್ನು ಬೆಂಗಳೂರಿಗೆ ಬಳಸಲು ನಾನು ಆದೇಶ ಹೊರಡಿಸಿದ್ದು, ಮತ್ತೊಂದು ಹಂತದ ಯೋಜನೆ ಅಗತ್ಯವಿದೆ. ಹೀಗಾಗಿ ನೀರಿನ ದರ ಪರಿಷ್ಕರಣೆ ವಿಚಾರವಾಗಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಅಧಿಕಾರಿಗಳು ಸಾಧ್ಯಾಸಾಧ್ಯತೆಗಳ ಪರಿಶೀಲಿಸಿದ ನಂತರ ದರ ಏರಿಕೆ ವಿಚಾರವಾಗಿ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು.

ಪ್ರಧಾನಿಯಿಂದ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಿಸಿದ್ದು ಯಾವ ಕಾರಣಕ್ಕೆ?
ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರು ಕೈ ಹಿಡಿಯಲಿಲ್ಲ ಎಂದು ಕೆಂಪೇಗೌಡ ಜಯಂತಿ ಆಚರಣೆಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಬಿಜೆಪಿ ಯವರು ವಿಮಾನ ನಿಲ್ದಾಣದ ಬಳಿ ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿದ್ದು ಯಾಕೆ? ಆ ಕಾರ್ಯಕ್ರಮಕ್ಕೆ ಜನ ಸೇರಿಸಲಾಗದೆ ಬಲವಂತವಾಗಿ ಶಾಲಾ, ಕಾಲೇಜು ಮಕ್ಕಳನ್ನು ಕರೆಸಿದ್ದು ಯಾಕೆ? ಆ ಕಾರ್ಯಕ್ರಮದಲ್ಲಿ ಪ್ರತಿಮೆಗೆ ತಗುಲಿದ ವೆಚ್ಚಕ್ಕಿಂತ ಉದ್ಘಾಟನಾ ಕಾರ್ಯಕ್ರಮದ ವೆಚ್ಚವೇ ಹೆಚ್ಚಾಗಿತ್ತು. ಈ ಬಗ್ಗೆ ಕೃಷ್ಣಭೈರೇಗೌಡರನ್ನು ಕೇಳಿ ಸಂಪೂರ್ಣ ದಾಖಲೆ ನೀಡುತ್ತಾರೆ” ಎಂದು ತಿಳಿಸಿದರು.

ಇದನ್ನೂ ಓದಿ: ತೈಲ ಬೆಲೆ ಏರಿಕೆ ಖಂಡಿಸಿ ಜೂ.20 ರಂದು ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ: ಗುಳಗಣ್ಣನವರ್

Advertisement

Udayavani is now on Telegram. Click here to join our channel and stay updated with the latest news.

Next