Advertisement

ರಾಜ್ಯದ 25 ಸಂಸದರಿಗೆ ಅಭಿನಂದನೆ- ಡಿಕೆಶಿ ಲೇವಡಿ

07:40 PM Feb 01, 2022 | Team Udayavani |

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯೋಜನೆಗಳ ಸುರಿಮಳೆ ಕೊಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ 25 ಬಿಜೆಪಿ ಸಂಸದರು ಹಾಗೂ ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಲೇವಡಿ ಮಾಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ರಂಗದಲ್ಲೂ ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ ಹಾಗೂ ಕರ್ನಾಟಕದ ಹೆಸರನ್ನೂ ಪ್ರಸ್ತಾಪ ಮಾಡದಂತಹ ಬಜೆಟ್‌ ಅನ್ನು ಕೇಂದ್ರ ಸರ್ಕಾರ ಇಂದು ಮಂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತರಾಮನ್‌ ಅವರು ಕಿಂಚಿತ್ತಾದರೂ ಸ್ವಾರ್ಥ ಪ್ರದರ್ಶಿಸಿ ರಾಜ್ಯದ ಬಗ್ಗೆ ಯೋಚಿಸುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆವು. ಆ ನಿರೀಕ್ಷೆ ಸುಳ್ಳಾಗಿದೆ. ಇದು ಕೇಂದ್ರ ಬಜೆಟ್‌ ಅಲ್ಲ. ಕೋವಿಡ್‌ ಬಜೆಟ್‌. ಇದರಿಂದ ಎಲ್ಲ ವರ್ಗದ ಜನ ನರಳುವಂತಾಗಿದೆ ಎಂದು ಹೇಳಿದ್ದಾರೆ.

ಕ್ರಿಪ್ಟೋ ಕರೆನ್ಸಿ ಕಾನೂನಾತ್ಮಕಗೊಳಿಸಿ ಶೇ.30 ರಷ್ಟು ತೆರಿಗೆ ವಿಧಿಸಿದ್ದಾರೆ. ನರೇಗಾ ಯೋಜನೆಗೆ ಅನುದಾನ ಕಡಿಮೆ ಮಾಡಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದವರು, ಈಗ ವರ್ಷಕ್ಕೆ 60 ಲಕ್ಷ ಉದ್ಯೋಗ ಕೊಡುತ್ತೇವೆ ಎಂದಿದ್ದಾರೆ. ಇದು ಇವರ ನುಡಿದಂತೆ ನಡೆಯುವ ಸರ್ಕಾರ ಎಂದು ವ್ಯಂಗ್ಯವಾಡಿದ್ದಾರೆ.

ವೇತನ ಶ್ರೇಣಿಯವರಿಗೂ, ರೈತರಿಗೂ, ಸ್ವಯಂ ಉದ್ಯೋಗಸ್ಥರಿಗೂ, ಉದ್ಯೋಗದಾತರು ಹಾಗೂ ಉದ್ಯೋಗಿಗಳು ಸೇರಿದಂತೆ ಯಾವುದೇ ವರ್ಗಕ್ಕೂ ಈ ಬಜೆಟ್‌ ನಿಂದ ಅನುಕೂಲವಾಗಿಲ್ಲ. ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಇಂತಹ ಪೇಶೆಂಟ್‌ ಹಾಗೂ ಕೋವಿಡ್‌ ಬಜೆಟ್‌ ಕಂಡಿರಲಿಲ್ಲ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ:ಡಾ.ಜಿ.ಪರಮೇಶ್ವರ್ ಕೋವಿಡ್ ನಿಂದ ಗುಣಮುಖವಾಗಲೆಂದು ಪ್ರಾರ್ಥನೆ

ಈ ಸರ್ಕಾರ ಕಾರ್ಪೊರೇಟ್‌ ಲಾಬಿಗೆ ಮಣಿದು ಅವರಿಗೆ ನೆರವಾಗುವ ಕೆಲಸ ಮಾಡುತ್ತಿದೆಯೇ ಹೊರತು ಜನ ಸಾಮಾನ್ಯರಿಗೆ ಅನುಕೂಲವಾಗುವ ಯಾವುದೇ ಯೋಜನೆಗಳು ಇದರಲ್ಲಿ ಇಲ್ಲ. ಎಲ್ಲರ ಜೇಬಿಗೂ ಕತ್ತರಿ ಹಾಕಿ ಪಿಕ್‌ ಪಾಕೆಟ್‌ ಮಾಡುವ ಬಜೆಟ್‌ ಇದಾಗಿದೆ ಎಂದು ತಿಳಿಸಿದ್ದಾರೆ.

ಕಾವೇರಿ ಹಾಗೂ ಪೆನ್ನಾರ್‌ ನದಿ ಜೋಡಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಇದರಿಂದ ಕರ್ನಾಟಕಕ್ಕೆ ಯಾವ ಅನುಕೂಲವಾಗುತ್ತದೆ ಎಂದ ಅವರು, ರಾಜ್ಯದ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಎರಡು ಮೂರು ದಿನಗಳಲ್ಲಿ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡಿ ಯೋಜನೆ ಆರಂಭಿಸಲಿ ಎಂದು ಸವಾಲು ಹಾಕಿದರು.

ಕರ್ನಾಟಕದ ನಿಮ್ಹಾನ್ಸ್‌ನಲ್ಲಿ ನೋಡಲ್‌ ಕಚೇರಿ ಮಾಡುತ್ತಿದ್ದು ಸರ್ಕಾರದಲ್ಲಿ ಮೆಂಟಲ್‌ ಗಿರಾಕಿಗಳು ಹೆಚ್ಚಾಗಿದ್ದಾರೆ. ಅವರನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next