Advertisement

ಖಳನಾಯಕ ಡಿ.ಕೆ.ಶಿವಕುಮಾರ್‌!

06:55 AM May 27, 2018 | |

ಬೆಂಗಳೂರು: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚನೆಯ ಮುಂದಾಳತ್ವ ವಹಿಸಿದ್ದ ಕಾಂಗ್ರೆಸ್‌ನ ಹಿರಿಯ ಸದಸ್ಯ ಡಿ.ಕೆ.ಶಿವಕುಮಾರ್‌ ಕುರಿತು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು “ಖಳನಾಯಕ’ ಎಂಬ ಪದ ಬಳಸಿದ್ದು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

Advertisement

ಯಡಿಯೂರಪ್ಪ ಅವರು ಮಾತನಾಡುತ್ತಾ, ಶಿವಕುಮಾರ್‌ ಅವರೇ ಈ ನಾಡಿನ ಜನರಿಗೆ ವಿಶ್ವಾಸ, ನಂಬಿಕೆ ದ್ರೋಹ ಮಾಡಿದಂತಹವರನ್ನು ಮುಖ್ಯಮಂತ್ರಿ ಮಾಡಿ ನೀವು ಖಳನಾಯಕರಾಗಿದ್ದೀರಿ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಿವಕುಮಾರ್‌, ಕಾಂಗ್ರೆಸ್‌ ವರಿಷ್ಠರು ಸೂಚಿಸಿದ ಕೆಲಸ ನಾನು ಮಾಡಿದ್ದೇನೆ. ಯಡಿಯೂರಪ್ಪ ಅವರ ಬಗ್ಗೆ ನನ್ನ ಸಂಬಂಧ, ಪ್ರೀತಿ, ವಿಶ್ವಾಸ ಚೆನ್ನಾಗಿದೆ. ಆದರೂ ನನ್ನನ್ನು ಖಳನಾಯಕ ಎಂದು ಹೇಳಿದ್ದಾರೆ. ಇದು ಸರಿಯಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಿಮಗೆ ಬೇಸರವಾದರೆ ಆ ಪದ ವಾಪಸ್‌ ಪಡೆಯೋಣ. ಆದರೆ, ನಾವಿಬ್ಬರೂ ಸ್ನೇಹಿತರು. ಮುಂದೆ ಮುಖ್ಯಮಂತ್ರಿಯಾಗುವವರು ನೀವು. ನಿಮ್ಮಂಥವರನ್ನು ಖಳನಾಯಕ ಎಂದು ಕರೆಯಲು ಸಾಧ್ಯವೇ ಎಂದಾಗ ಮುಖ್ಯಮಂತ್ರಿ ಆಗುತ್ತೇನೆ ಎಂದು ಶಿವಕುಮಾರ್‌ ಪ್ರತಿಕ್ರಿಯಿಸಿದರು. ಪಕ್ಷದಲ್ಲಿ ಈಗ ನಿಮಗೇನಾಗಿದೆ ಎಂಬುದು ಗೊತ್ತು. ಅಲ್ಲಿದ್ದೂ (ಕಾಂಗ್ರೆಸ್‌ನಲ್ಲಿ) ನೀವು ಮುಖ್ಯಮಂತ್ರಿ ಆಗುತ್ತೀರಾ? ಇಲ್ಲಿ ಬನ್ನಿ ಎಂದು ಆಹ್ವಾನಿಸಿದರು.

ಮಧ್ಯಪ್ರವೇಶಿಸಿದ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌, ಶಿವಕುಮಾರ್‌ ಇದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಕೆಲವರಿಗೆ ಆಹಾರವಾಗುವಂತಹದ್ದು ಇನ್ನು ಕೆಲವರಿಗೆ ವಿಷವಾಗುತ್ತದೆ ಎಂದಾಗ ಸದನ ನಗೆಗಡಲಲ್ಲಿ ತೇಲಿತು.

ಸಿದ್ದರಾಮಯ್ಯ ಇನ್ನೂ ಮುಖ್ಯಮಂತ್ರಿ
ಬೆಂಗಳೂರು:
ಸಾಣೇಹಳ್ಳಿ ಸ್ವಾಮೀಜಿ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆ ಖಂಡಿಸುವಾಗ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಕುಮಾರಸ್ವಾಮಿ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿ ಮೂರು ಬಾರಿ ಕ್ಷಮಿಸಿ ಎಂದು ಕ್ಷಮೆ ಯಾಚಿಸಿದ ಪ್ರಸಂಗ ನಡೆಯಿತು.

Advertisement

ವಿಶ್ವಾಸ ಮತ ಪ್ರಸ್ತಾವದ ಮೇಲಿನ ಚರ್ಚೆ ವೇಳೆ ಸಾಣೆಹಳ್ಳಿ ಸ್ವಾಮೀಜಿಗಳ ಬಗ್ಗೆ ಕುಮಾರಸ್ವಾಮಿ ಕೇವಲವಾಗಿ ಮಾತನಾಡಿದ್ದನ್ನು ಪ್ರಸ್ತಾಪಿಸಿದ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೀತಿ ಮಾಡಬಾರದಿತ್ತು ಎಂದರು. ಅಷ್ಟರಲ್ಲಿ ಇತರೆ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ, ಕುಮಾರಸ್ವಾಮಿ ಎಂದರು.

ತಕ್ಷಣ ಕ್ಷಮಿಸಿ ಎಂದು ಮೂರು ಬಾರಿ ಹೇಳಿ ಸಿದ್ದರಾಮಯ್ಯ ಅವರತ್ತ ನೋಡಿ ಕೈಮುಗಿದ ಯಡಿಯೂರಪ್ಪ, ನಿಮ್ಮ ಜಾಗದಲ್ಲಿ ಕುಮಾರಸ್ವಾಮಿ ಕೂತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದನ್ನು ಹೇಳದಂತೆ ನೋಡಿಕೊಳ್ಳಲು ಸಾಕಷ್ಟು ಪ್ರಾಕ್ಟೀಸ್‌ ಮಾಡಬೇಕಾಗಿದೆ. ನಿಮ್ಮನ್ನು ಮುಖ್ಯಮಂತ್ರಿ ಎಂದು ನಿಮ್ಮವರು ಹೇಳದಿರಬಹುದು. ಆದರೆ, ನಾನು ಮಾತ್ರ ಅದನ್ನು ಮರೆಯಲಾರೆ ಎಂದು ಸಿದ್ದರಾಮಯ್ಯ ಅವರ ಕಾಲೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next