ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಂಬೈನಲ್ಲಿ ಕೂತಿರುವ ಸಂತೃಪ್ತರಿಗೆ ಸಚಿವ ಸ್ಥಾನ ನೀಡದಿದ್ದರೆ ಅವರು ಯಡಿಯೂರಪ್ಪನವರನ್ನು ಹರಿದು ನುಂಗಿ ಬಿಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದರೆ ಯಡಿಯೂರಪ್ಪನವರ ಕಥೆ ‘ಗೋವಿಂದಾ’ ಎಂದು ವ್ಯಂಗ್ಯವಾಡಿದರು.
ಮೂವತ್ತು ವರ್ಷಗಳ ಕಾಲ ಸಾಕಿ ಸಲುಹಿ ಇಷ್ಟು ದೊಡ್ಡಮಟ್ಟಕ್ಕೆ ಬೆಳೆಸಿದ ನಮ್ಮನ್ನು, ಕಾರ್ಯಕರ್ತರನ್ನೇ ಸಂತೃಪ್ತರು ಬಿಡಲಿಲ್ಲ. ಇನ್ನು ಬಿಜೆಪಿ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ಸಿಗದಿದ್ದರೆ ಬಿಡ್ತಾರಾ? ಯಡಿಯೂರಪ್ಪನವರನ್ನು ಹರಿದು ನುಂಗುತ್ತಾರೆ. ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕಾರ ಮಾಡಿದರೆ 15 ಜನರಲ್ಲಿ ಮಹೇಶ್ ಕುಮಟಳ್ಳಿ ಬಿಟ್ಟು ಉಳಿದ ಎಲ್ಲರೂ ಸಚಿವ ಸ್ಥಾನಕ್ಕೆ ಪಟ್ಟು ಹಿಡಿಯುತ್ತಾರೆ. ಒಂದು ವೇಳೆ ಅವರಿಗೆ ಸಚಿವ ಸ್ಥಾನ ಸಿಗದಿದ್ದರೆ ಯಡಿಯೂರಪ್ಪನವರ ಪ್ಯಾಂಟು, ಶರ್ಟು ಹರಿದು ಹಾಕುತ್ತಾರೆ. ಒಬ್ಬ ಜೇಬು ಕಿತ್ತುಕೊಂಡರೆ, ಮತ್ತೂಬ್ಬ ಪ್ಯಾಂಟು, ಇನ್ನೊಬ್ಬ ಶರ್ಟು ಕಿತ್ತುಕೊಳ್ಳುತ್ತಾನೆ. ಅಷ್ಟೇಅಲ್ಲ, ಯಡಿಯೂರಪ್ಪನವರ ಸುತ್ತಮುತ್ತ ಇರುವ ಮುತ್ತು ರತ್ನಗಳನ್ನೆಲ್ಲಾ ಕಿತ್ತು ಹಾಕುತ್ತಾರೆ ಎಂದರು.
ಪಟ್ಟಿ ನನ್ನ ಬಳಿ ಇದೆ: ಯಡಿಯೂರಪ್ಪನವರಿಗೆ ಇನ್ನೂ ಅವರ ಬಗ್ಗೆ ಗೊತ್ತಿಲ್ಲ. ಮುಂಬೈನಲ್ಲಿರುವವರ ಪೈಕಿ ಒಬ್ಬನಿಗೆ ಬೆಂಗಳೂರು ನಗರಾಭಿವೃದ್ಧಿ, ಒಬ್ಬನಿಗೆ ಇಂಧನ, ಒಬ್ಬನಿಗೆ ಲೋಕೋಪಯೋಗಿ, ಮತ್ತೂಬ್ಬನಿಗೆ ಜಲ ಸಂಪನ್ಮೂಲ ಖಾತೆ ಬೇಕಂತೆ. ಈಗಾಗಲೇ ಸಚಿವ ಸ್ಥಾನ ಹಂಚಿಕೊಂಡು ಕುಳಿತಿದ್ದಾರೆ. ನನ್ನ ಹತ್ತಿರ ಅವರು ಮಾತನಾಡಿದ್ದು, ಯಾರಿಗೆ, ಯಾವ ಖಾತೆ ಬೇಕು ಎಂಬ ಪಟ್ಟಿ ನನ್ನ ಬಳಿ ಇದೆ. ನಾನು ಅದನ್ನು ಮುಂದಿನ ಅಧಿವೇಶನದಲ್ಲಿ ಹೇಳುತ್ತೇನೆ ಎಂದರು.
ಅವರನ್ನು ಬಿಜೆಪಿ ಹೈಕಮಾಂಡ್ ನಿಯಂತ್ರಣ ಮಾಡು ತ್ತದೆಯೋ, ಬಿಡುತ್ತದೆಯೋ ಗೊತ್ತಿಲ್ಲ. ಆದರೆ, ನಮ್ಮ ಸ್ನೇಹಿತರ ಪರಿಸ್ಥಿತಿ ಏನಾಗುತ್ತದೆ ಎಂದು ಗೊತ್ತು. ಯಡಿ ಯೂರಪ್ಪನವರು ತಮ್ಮ ಜತೆ ಇವರಿಗೂ ಪ್ರಮಾಣವಚನ ಬೋಧಿಸಲು ಅವಕಾಶ ಮಾಡಿಕೊಟ್ಟರೆ ಅವರು ಬಚಾವಾಗುತ್ತಾರೆ. ಇಲ್ಲದಿದ್ದರೆ, ಯಡಿಯೂರಪ್ಪ ಕಥೆ ‘ಗೋವಿಂದಾ, ಗೋವಿಂದಾ’ ಎಂದು ವ್ಯಂಗ್ಯವಾಡಿದರು.
ರಾಜೀನಾಮೆ ಅಂಗೀಕಾರ ಸ್ಪೀಕರ್ ಪರಮಾಧಿಕಾರ: ಬಿಜೆಪಿ ಹೈಕಮಾಂಡ್, ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡುತ್ತೋ, ಬಿಡುತ್ತೋ ಗೊತ್ತಿಲ್ಲ. ಯಾವುದೇ ಸರ್ಕಾರ ರಚನೆಯಾಗ ಬೇಕಾದರೆ 224 ಶಾಸಕರ ಪೈಕಿ 113 ರ ಸಂಖ್ಯೆಯ ಬಹುಮತ ಇರಬೇಕು. ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸು ತ್ತಾರೊ, ಬಿಡುತ್ತಾರೊ ಗೊತ್ತಿಲ್ಲ. ಅದು ಅವರ ಪರಮಾಧಿಕಾರ. ಸುಪ್ರೀಂ ಕೋರ್ಟೇ ಅವರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಹೀಗಿರುವಾಗ ಅದರ ಬಗ್ಗೆ ಮಾತನಾಡಲು ನಾನ್ಯಾರು ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ‘ಶಿವರಾಮ ಹೆಬ್ಟಾರ್ ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಇಲ್ಲಿ ಅತೃಪ್ತರು ಯಾರೂ ಇಲ್ಲ. ಎಲ್ಲರು ಸಂತೃಪ್ತರು. ನಾನು ಏನು ಹೇಳಬೇಕೋ ಎಲ್ಲವನ್ನೂ ಸದನದಲ್ಲಿ ಹೇಳಿದ್ದೇನೆ’ ಎಂದು ಹೇಳಿದರು.