ಬೆಂಗಳೂರು: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಗುರುವಾರ ರಾತ್ರಿ ನಡೆದ ಸಂಧಾನ ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮನೋಹರ್ ತಹಶೀಲ್ದಾರ್, ಶ್ರೀನಿವಾಸ ಮಾನೆ, ಪ್ರಕಾಶ್ ಪಾಟೀಲ್ ಅವರಲ್ಲಿ ಯಾರೇ ಆಗಿರಲಿ ಪಕ್ಷ ಬಹಳ ಮುಖ್ಯ ಎಂದು ಅರಿತಿದ್ದಾರೆ. ಇದು ಉಪ ಚುನಾವಣೆಯಾಗಿದ್ದು, ನಾವು ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಾರೆ. ಇಡೀ ಜಿಲ್ಲೆಯ ನಾಯಕರು ಶಾಸಕಾಂಗ ಪಕ್ಷದ ನಾಯಕರ ಸಮ್ಮುಖದಲ್ಲಿ ಕೂತು ಚರ್ಚೆ ಮಾಡಿದ್ದೇವೆ. ರಾಜಕೀಯವಾಗಿ ಎಲ್ಲರಿಗೂ ಸ್ಥಾನಮಾನ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಅದನ್ನು ನಾವು ಮಾಡುತ್ತೇವೆ. ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರೂ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಒಟ್ಟಾಗಿ ಕೆಲಸ ಮಾಡುತ್ತೇವೆ:
ಮನೋಹರ್ ತಹಶೀಲ್ದಾರ್ ಮಾತನಾಡಿ, ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಅವರು ಹಾಗೂ ಜಿಲ್ಲೆಯ ಎಲ್ಲಾ ನಾಯಕರು ಇಂದು ಸಭೆಯಲ್ಲಿ ಭಾಗವಹಿಸಿದ್ದೆವು. ಇಲ್ಲಿ ನಾಯಕರು ನಮ್ಮ ಹಾಗೂ ಉಳಿದವರ ಅಹವಾಲು ಕೇಳಿದ್ದು, ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ನಾವು ಒಟ್ಟಾಗಿ ಚುನಾವಣೆ ಮಾಡಿ ಪಕ್ಷ ಗೆಲ್ಲುವಂತೆ ಮಾಡಬೇಕು, ಯಾರೂ ಅನಗತ್ಯ ಹೇಳಿಕೆ ನೀಡಬಾರದು, ಅಭ್ಯರ್ಥಿ ಯಾರು ಎಂದು ಈಗಲೇ ಹೇಳುವುದಿಲ್ಲ. ಹೈಕಮಾಂಡ್ ಜತೆ ಚರ್ಚಿಸುತ್ತೇವೆ. ನಂತರ ಹೈಕಮಾಂಡ್ ಟಿಕೆಟ್ ಘೋಷಿಸಲಿದೆ. ಹೀಗಾಗಿ ನಾವು ಶಿಸ್ತು ಹಾಗೂ ಒಗ್ಗಟ್ಟಿನಿಂದ ಚುನಾವಣೆ ನಡೆಸಿ ಪಕ್ಷ ಗೆಲ್ಲಿಸುವ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಹೇಳಿದರು.
ನಾನು 45 ವರ್ಷಗಳಿಂದ ಪಕ್ಷ ಕಟ್ಟಿದ್ದು, ನಾಲ್ಕು ಬಾರಿ ಶಾಸಕನಾಗಿದ್ದೇನೆ. ನಮಗೆ ಪಕ್ಷದ ಟಿಕೆಟ್ ಬೇಕು ಎಂದು ಕೇಳುವುದು ನಮ್ಮ ಹಕ್ಕು. ನಾವು ನಮ್ಮ ಮನವಿ ಸಲ್ಲಿಸಿದ್ದೆವು. ಅವರು ಅವರ ಮನವಿ ಸಲ್ಲಿಸಿದ್ದರು. ಪಕ್ಷದ ನಾಯಕರು ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯ ಎಂದಿದ್ದಾರೆ. ಜತೆಗೆ ಟಿಕೆಟ್ ಸಿಗದವರಿಗೆ ರಾಜಕೀಯ ಸ್ಥಾನಮಾನ ನೀಡಿ, ಗೌರವ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದಕ್ಕೆ ನಾವೆಲ್ಲರೂ ಒಪ್ಪಿದ್ದೇವೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ನಾವು ಒಂದಾಗಿ ಕೆಲಸ ಮಾಡುತ್ತೇವೆ ಎಂದರು.
ಪಕ್ಷದ ತೀರ್ಮಾನಕ್ಕೆ ಬದ್ಧ :
ಶ್ರೀನಿವಾಸ ಮಾನೆ ಮಾತನಾಡಿ,ವರಿಷ್ಠರ ಮುಂದೆ ಸುದೀರ್ಘವಾಗಿ ನಮ್ಮ ಅಭಿಪ್ರಾಯ ಮಂಡಿಸಿದ್ದು, ನಮ್ಮ ನಾಯಕರು ಅದನ್ನು ಗಮನಿಸಿದ್ದಾರೆ. ಪಕ್ಷ ಹಾಗೂ ಅದರ ಮೇಲೆ ನಂಬಿಕೆ ಇಟ್ಟಿರುವ ಜನರಿಗಾಗಿ, ಬಿಜೆಪಿ ಸರ್ಕಾರದ ವೈಫಲ್ಯದ ವಿರುದ್ಧ, ರಾಜ್ಯದ ಹಿತದೃಷ್ಟಿಯಿಂದ ನಮ್ಮ ಭಿನ್ನಾಭಿಪ್ರಾಯ ಬದಿಗಿಟ್ಟು, ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿ ಒಮ್ಮತದಿಂದ ಚುನಾವಣೆ ಎದುರಿಸಲು ನಾವು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.