ಬೆಂಗಳೂರು: ಪಾಪ ಉಸ್ತುವಾರಿ ಸಚಿವರು ಗಂಡಸು ಯಾರಿದಾರೆ ಅಂತ ಕೇಳಿದ್ದರು, ಅವರೊಬ್ಬರೆ ಗಂಡಸರು. ರಾಮನಗರಲ್ಲಿ ಗಂಡಸರಿಲ್ಲ ನಾವೆಲ್ಲಾ ಹೆಂಗಸರು ಎಂದು ಬಿಜೆಪಿ ಸಚಿವರೊಬ್ಬರ ಹೆಸರು ಹೇಳದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ನಾನು, ನನ್ನ ತಮ್ಮ, ಅನಿತ ಕುಮಾರಸ್ವಾಮಿ ಎಲ್ಲರೂ ‘ಅವರ’ ಗಂಡಸ್ತನ ನೋಡಿ ಗಢ ಗಢ ನಡುಗುತ್ತಿದ್ದೇವೆ. ಮುಖ್ಯಮಂತ್ರಿಗಳ ಮುಂದೆಯೇ ಗಂಡಸು ಯಾರು? ಅಂತ ಕೇಳಿದ್ದರು. ಸಚಿವರೊಬ್ಬರ ಹೆಸರು ಪಿಎಸ್ಐ ಅಕ್ರಮದಲ್ಲಿ ಕೇಳಿ ಬಂದಿದೆ, ಅವರ ತಮ್ಮ ಅಂತ ಹೇಳಲ್ಲ, ಅವರ ಕುಟುಂಬಸ್ಥರು ಸಂಬಂಧಿಕರು ಭಾಗಿಯಾಗಿದ್ದಾರೆಂಬ ಮಾಹಿತಿ ಬಂದಿದೆ. ಸಿಎಂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾನು ಆ ಸಚಿವರ ಬಗ್ಗೆ ಮಾತನಾಡುತ್ತೇನೆ ಎಂದು ನನಗೂ ಕಾಲ್ ಬರುತ್ತಿವೆ. ಅಣ್ಣ ಅವರ ಬಗ್ಗೆ ಮಾತನಾಡಬೇಡಿ ಅವರು ಈ ಬಾರಿ ಸಿಎಂ ಆಗಿ ಬಿಡುತ್ತಾರೆ ಅವರ ಬಗ್ಗೆ ಮಾತನಾಡಿ ತೊಂದರೆ ಮಾಡಬೇಡಿಯೆಂದು ಯಾರ್ಯಾರೋ ಕಾಲ್ ಮಾಡಿದ್ದರು. ಮಂಡ್ಯದಿಂದ ಒಬ್ಬರು ಅಧ್ಯಕ್ಷರು ಕರೆ ಮಾಡಿ, ಅವರು ಸಿಎಂ ರೇಸ್ ನಲ್ಲಿ ಇದ್ದಾರೆ ಸಿಎಂ ಆಗ್ಬಿಡ್ತಾರೆ ಅಣ್ಣ ಎಂದು ಹೇಳಿದರು. ಮಾಧ್ಯಮಗಳಲ್ಲಿ ಬರುತ್ತಿದೆ, ನೀವ್ಯಾಕೆ ಹೆಸರು ಹೇಳಲು ಹೋಗುತ್ತೀರಿ.?ರಕ್ಷಣೆ ಮಾಡಿ ಅಂದರು ಎಂದು ಮಾರ್ಮಿಕವಾಗಿ ಹೇಳಿದರು.
ಇದನ್ನೂ ಓದಿ:ಉತ್ತಮ ಆಡಳಿತಕ್ಕೆ ಇದು ಸಕಾಲ…ಹೊಸ ರಾಜಕೀಯ ಪಕ್ಷ ಸ್ಥಾಪನೆಯ ಸುಳಿವು ಕೊಟ್ಟ ಪ್ರಶಾಂತ್ ಕಿಶೋರ್!
ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಭಾಗಿಯಾಗಿದ್ದಾರೆಂದು ನಾನು ಹೇಳಲ್ಲ. ಸಿಎಂ ಬೊಮ್ಮಾಯಿ ಅವರ ಕಾಲದಲ್ಲಿ ಈ ಅಕ್ರಮ ನಡೆದಿಲ್ಲ, ಅದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಸಿಎಂ ಅವರ ಸಚಿವರ ರಕ್ಷಣೆ ಮಾಡಬಾರದು.ಯಾರೇ ಇರಲಿ, ಎಷ್ಟೇ ದೊಡ್ಡವರಾಗಿರಲಿ ನಿಷ್ಪಕ್ಷಪಾತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಸಿಒಡಿ ಅಧಿಕಾರಿಗಳು ಆಯ್ಕೆಯಾದ ವಿದ್ಯಾರ್ಥಿಗಳ ಹಳ್ಳಿಗಳಿಗೆ ಹೋಗಿದ್ದಾರಾ? ಯಾವ ಅಧಿಕಾರಿಗಳು ಹೋಗಿಲ್ಲ. ಸರ್ಕಾರ ಅಕ್ರಮವನ್ನು ಮುಚ್ಚಿ ಹಾಕಲು ಹೊರಟಿದೆ ಅನಿಸುತ್ತಿದೆ ಎಂದರು.
ಪ್ರಭಾವಿ ಸಚಿವರೊಬ್ಬರು ಕರೆ ಮಾಡಿ, ಅಕ್ರಮದಲ್ಲಿರುವ ಒಬ್ಬರನ್ನು ಪೊಲೀಸರಿಂದ ಬಿಡಿಸಿದ್ದಾರೆಂಬ ಮಾಹಿತಿ ಇದೆ. ಯಾರು ಕರೆ ಮಾಡಿದ್ದು? ಏಕೆ ಮಾಡ್ತಿದ್ದಾರೆ? ಅವರ ಪಾತ್ರ ಏನು ಎಂಬ ಬಗ್ಗೆ ತನಿಖೆ ನಡೆಸಲಿ. ಭ್ರಷ್ಟಾಚಾರ ಹಾಗೂ ಕೆಮ್ಮು ಮುಚ್ಚಿಡಲು ಸಾಧ್ಯವಿಲ್ಲ, ಅದು ಹೊರಗೆ ಬಂದೇ ಬರುತ್ತದೆ ಎಂದು ವ್ಯಂಗ್ಯವಾಡಿದರು