ಹುಮನಾಬಾದ್: “ನೂರಾರು ಕೋಟಿ ರೂ.ಕಲ್ಲಿದ್ದಲು ಹಗರಣದಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಕೇಳಿ ಬರುತ್ತಿದ್ದು, ಅವರು ಕೂಡಲೇ ಇಂಧನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದ ಶ್ರೀರಾಮುಲು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಬಯಲಿಗೆಳೆದ ಈ ಶತಮಾನದ ಅತಿ ದೊಡ್ಡ ಹಗರಣ ಇದಾಗಿದೆ. ಯುಪಿಎ ಸರ್ಕಾರದ ಅವ ಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಕಲ್ಲಿದ್ದಲು ಹಗರಣದಲ್ಲಿ ಅತಿ ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು 47 ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಅಲ್ಲದೇ ಆ ಕಂಪನಿಗಳೊಂದಿಗೆ ವ್ಯವಹಾರ ಕೂಡ ಮಾಡಬಾರದು ಎಂದು ಸ್ಪಷ್ಟಪಡಿಸಿತ್ತು.
ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡಬೇಕೆಂಬ ಉದ್ದೇಶದಿಂದ ಕಪ್ಪು ಪಟ್ಟಿಗೆ ಸೇರಿದ ಒಂದು ಕಂಪನಿ ಮೂಲಕ ಕಲ್ಲಿದ್ದಲು ಖರೀದಿಸಿದೆ. ಕಲ್ಲಿದ್ದಲು ಖರೀದಿಸಿರುವುದು ತಪ್ಪು ಎಂದು ಸುಪ್ರೀಂಕೋರ್ಟ್ ದಂಡ ವಿಧಿ ಸಿತ್ತು. ಆ ದಂಡದ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸಿದೆ. ಜನರಿಗೆ ಸೂಕ್ತ ವಿದ್ಯುತ್ ನೀಡುವಲ್ಲಿ ವಿಫಲಗೊಂಡ ಸಚಿವ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದ ಅವರು, ಸಚಿವರೊಂದಿಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದರು.
ಕಲ್ಲಿದ್ದಲು ಹಗರಣ ರಾಜ್ಯದ ಅತಿ ದೊಡ್ಡ ಹಗರಣವಾಗಿದ್ದು, ಸಿಬಿಐ ತನಿಖೆಯಿಂದ ಎಲ್ಲ ಬಣ್ಣ ಬಯಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಾಖಲೆಗಳ ಸಮೇತ ಸುದ್ದಿಗೋಷ್ಠಿ ನಡೆಸಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ನ್ಯಾಯಾಲಯದ ಆದೇಶದಂತೆ ಎಲ್ಲಾ ನಡೆದಿದೆ ಎಂದು ಹೇಳಿಕೆ ನೀಡಿದ್ದು ಎಷ್ಟು ಸರಿ?
-ಜಗದೀಶ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ