Advertisement

ಎರಡನೇ ದಿನವೂ ಮುಂದುವರಿದ ಡಿಕೆಶಿ –ರಮ್ಯಾ ಟ್ವೀಟ್‌ ಸಮರ

10:05 PM May 12, 2022 | Team Udayavani |

ಬೆಂಗಳೂರು: ನಟಿ ಹಾಗೂ ಕಾಂಗ್ರೆಸ್‌ ನಾಯಕಿ ರಮ್ಯಾ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬೆಂಬಲಿಗರ ನಡುವಿನ ಟ್ವಿಟ್‌ ವಾರ್‌ ಎರಡನೇ ದಿನವೂ ಮುಂದುವರಿದಿದ್ದು, ಗುರುವಾರ ಇಬ್ಬರೂ ಸಾಮಾಜಿಕ ಜಾಲತಾಣಗಳ ಮೂಲಕ   ವಾಗ್ಯುದ್ಧ ನಡೆಸಿದರು.

Advertisement

ಎಂ.ಬಿ. ಪಾಟೀಲ್‌- ಸಚಿವ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ  ಭೇಟಿ ವಿಚಾರದಲ್ಲಿ ಶುರುವಾದ ಪ್ರತಿಕ್ರಿಯೆಗಳು ಈಗ “ಅವಕಾಶ ನೀಡಿದವರು ಮತ್ತು ಅವಕಾಶವಾದಿಗಳ’ ಕೆಸರೆರಚಾಟಕ್ಕೆ ಬಂದು ನಿಂತಿದೆ.

“ಅವಕಾಶ ಕೊಟ್ಟ ನಾಯಕರನ್ನೇ ಮರೆತು ಮಾತನಾಡುತ್ತಿದ್ದೀಯಾ? ಏಣಿ ಹತ್ತಿದ ಮೇಲೆ ಒದೆಯುವುದು ಎಂದರೆ ಇದೇ. ನಿಮ್ಮನ್ನು ಪರಿಚಯಿಸಿದವರಿಗೇ ಈಗ ಪಕ್ಷದ ಆಗುಹೋಗುಗಳ ಬಗ್ಗೆ ಪಾಠ ಮಾಡುತ್ತಿದ್ದೀರಾ? ನಮ್ಮ ನಾಯಕರ ಬಗ್ಗೆ ನೀವು ಮಾತನಾಡುವ ಅಗತ್ಯವಿಲ್ಲ’ ಎಂದು ಡಿ.ಕೆ. ಶಿವಕುಮಾರ್‌ ಬೆಂಬಲಿಗರು ಬುಧವಾರ ಟ್ವೀಟ್‌ ಮೂಲಕ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ರಮ್ಯಾ ತಿರುಗೇಟು ನೀಡಿದ್ದಾರೆ. “ನನಗೆ ಯಾರೂ ಅವಕಾಶ ನೀಡಿಲ್ಲ. ನನಗೆ ಅವಕಾಶ ನೀಡಿದ್ದು ಹಾಗೂ ಬೆನ್ನೆಲುಬಾಗಿ ನಿಂತಿದ್ದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮಾತ್ರ. ಅವಕಾಶ ನೀಡಿರುವುದಾಗಿ ಈಗ ಹೇಳಿಕೊಳ್ಳುತ್ತಿರುವವರು ಸ್ವತಃ ಅವಕಾಶವಾದಿಗಳು. ನನ್ನ ಬೆನ್ನಿಗೆ ಚೂರಿ ಹಾಕಿದವರು ಹಾಗೂ ನನ್ನ ಮೇಲೆ ಹಣ ದುರ್ಬಳಕೆ ಆರೋಪ ಹೊರಿಸಿ ಹತ್ತಿಕ್ಕಲು ಯತ್ನಿಸಿದವರು’ ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ನೇರವಾಗಿ ಆಕ್ರೋಶ ಹೊರಹಾಕಿದ್ದಾರೆ.

ಕಚೇರಿ= ಡಿಕೆಶಿ? :

Advertisement

ಇದಕ್ಕೆ ಪೂರಕವಾಗಿ ಬುಧವಾರ ತಮ್ಮನ್ನು ಟ್ರೋಲ್‌ ಮಾಡಲು “ಕಚೇರಿ’ಯು ಕಾಂಗ್ರೆಸ್‌ ಹಿರಿಯ ನಾಯಕರು, ಕಾರ್ಯಕರ್ತರಿಗೆ ಈ ಸಂದೇಶಗಳನ್ನು ಕಳುಹಿಸಿದೆ. ನನ್ನನ್ನು ಟ್ರೋಲ್‌ ಮಾಡಲು ನೀವು ತೊಂದರೆ ತೆಗೆದುಕೊಳ್ಳಬೇಡಿ. ನಾನೇ ಮಾಡುತ್ತೇನೆ’ ಎಂದು ಹೇಳಿ ಎಲ್ಲ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್‌ ಖಾತೆಯಲ್ಲಿ ರಮ್ಯಾ ಹಂಚಿಕೊಂಡಿದ್ದರು. ಗುರುವಾರ ಆ “ಕಚೇರಿ’ ಎಂದರೆ ಯಾರು ಎಂಬುದನ್ನೂ ಸ್ಪಷ್ಟಪಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದ ರಾಜ್ಯ ಕಾಂಗ್ರೆಸ್‌ (ಕಚೇರಿ) ಎಂದು ಹೇಳಿದ್ದಾರೆ.

“ಇಷ್ಟೇ ಅಲ್ಲ, ಈ ಹಿಂದೆ ಸುದ್ದಿ ವಾಹಿನಿಗಳಲ್ಲಿ ನಾನು 8 ಕೋಟಿ ಹಣದೊಂದಿಗೆ ಪರಾರಿಯಾಗಿದ್ದೇನೆ ಎಂದು ಸುದ್ದಿ ಬಿತ್ತರಿಸಿದ್ದರು. ಅಂದು  ಮೌನವಾಗಿದ್ದದ್ದೇ ನಾನು ಮಾಡಿದ ತಪ್ಪು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ತಮ್ಮ ಮುಂದಿನ ಕರ್ನಾಟಕ ಭೇಟಿ ವೇಳೆ  ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಮನವಿ ಮಾಡುತ್ತೇನೆ. ಇಂತಹ ಆರೋಪಗಳನ್ನು ಹೊತ್ತು ಜೀವನಪೂರ್ತಿ ಇರಲಾರೆ. ದಯವಿಟ್ಟು ಈ ಬಗ್ಗೆ ಸ್ಪಷ್ಟನೆ ನೀಡಿ’ ಎಂದು ವೇಣುಗೋಪಾಲ್‌ ಅವರಿಗೆ ಮನವಿ ಮಾಡಿದ್ದಾರೆ.

ರಂಪಾಟ ಬೇಡ; ಪಕ್ಷದ ವೇದಿಕೆಯಲ್ಲಿ ಚರ್ಚೆ :

ಈ ಮಾತಿನ ಯುದ್ಧಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿರುವ ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್‌, “ಎಂ.ಬಿ. ಪಾಟೀಲ್‌ ಅವರು ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ರಮ್ಯಾ ಅವರು ಪಕ್ಷದ ಮಾಜಿ ಸಂಸದೆ. ಇಬ್ಬರೂ ನಮಗೆ ಬೇಕಾದವರು. ಅನಗತ್ಯ ರಂಪಾಟ ಬೇಡ. ಯಾರಿಗೆ ಯಾವ ವಿಚಾರವಾಗಿ ನೋವಾಗಿದೆಯೋ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಚರ್ಚೆ ಮಾಡಲು ಸಿದ್ಧವಿಲ್ಲ’ ಎಂದು ಹೇಳಿದರು.

“ನನಗೆ ಯಾವುದೇ ವಿಚಾರ ತಿಳಿದಿಲ್ಲ. ಎಲ್ಲಿ ಏನು ಅಪಾರ್ಥವಾಗಿದೆಯೋ ಗೊತ್ತಿಲ್ಲ. ಮಾಧ್ಯಮಗಳು ನಮ್ಮ ಮನೆಗೆ ಬಂದು ಅಶ್ವತ್ಥ್ ನಾರಾಯಣ ಅವರು ಎಂ.ಬಿ. ಪಾಟೀಲ್‌ ಅವರ ಮನೆಗೆ ಹೋಗಿದ್ದಾರೆ ಎಂದು ಪ್ರಶ್ನೆ ಕೇಳಿದರು. ನಾನು ರಕ್ಷಣೆಗೆ ಹೋಗಿರಬಹುದು ಎಂದು ಹೇಳಿದ್ದೇನೆ. ಇದರ ಹೊರತಾಗಿ ಬೇರೇನೂ ವಿಚಾರವಿಲ್ಲ’ ಎಂದು ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next