ಬೆಂಗಳೂರು: ರೈತರ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಸದಾ ರೈತರ ಬೆನ್ನುಲುಬಾಗಿ ನಿಲ್ಲುತ್ತದೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ರೈತರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ನಮ್ಮ ಪಕ್ಷ ರೈತರ ಧ್ವನಿಗೆ ಜೊತೆಯಾಗಿ ಸೋಮವಾರದ ಭಾರತ್ ಬಂದ್ ಗೆ ಬೆಂಬಲ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತಾನಾಡಿದ ಅವರು, ನಾವು ಯಾರನ್ನೂ ಬಲವಂತ ಮಾಡಿ ನಮ್ಮ ಪಕ್ಷಕ್ಕೆ ಬನ್ನಿಯೆಂದು ಕರೆದಿಲ್ಲ. ಅವರಾಗಿಯೇ ಪಕ್ಷಕ್ಕೆ ಬರಲು ಮುಂದಾಗಿದ್ದಾರೆ. ಬಿಜೆಪಿ, ಜೆಡಿಎಸ್ ನ ಹಲವರು ಪಕ್ಷಕ್ಕೆ ಬರಲು ಮುಂದಾಗಿದ್ದಾರೆ. ಇದಕ್ಕಾಗಿ ಯಾವುದೇ ಷರತ್ತು ಇಲ್ಲದೆ ಬೇರೆ ಪಕ್ಷದವರು ಸ್ಥಳೀಯಮಟ್ಟದಲ್ಲಿ ಅರ್ಜಿಗಳನ್ನು ಹಾಕಿದ್ದಾರೆ ಎಂದರು.
ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದ, ಕಾಂಗ್ರೆಸ್ ಪಕ್ಷದ 20 ಜನ ಬಿಜೆಪಿಯ ಸಂಪರ್ಕದಲ್ಲಿ ಇದ್ದಾರೆನ್ನುವ ಮಾತಿಗೆ ಪ್ರತ್ಯುತ್ತರ ಕೊಟ್ಟ ಡಿಕೆ ಶಿವಕುಮಾರ್, 20 ಅಲ್ಲಾ 40 ಜನರನ್ನು ತೆಗೆದುಕೊಳ್ಳಿ, ಕಾಂಗ್ರೆಸ್ ಪಕ್ಷವನ್ನು ಯಾರು ಏನೂ ಮಾಡಲು ಸಾದ್ಯವಿಲ್ಲ. 2023ಕ್ಕೆ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಪಕ್ಷದ ನಮ್ಮಪಕ್ಷದ ಇತಿಹಾಸದ ಬಗ್ಗೆ ಯಾರಿಗೂ ಹೇಳಬೇಕಿಲ್ಲ. ಕಾಂಗ್ರೆಸ್ ನ ಶಕ್ತಿ ಇಡೀ ದೇಶದ ಶಕ್ತಿ. ಕಾಂಗ್ರೆಸ್ ಹೊಸ ಯುಗಕ್ಕೆ ಕಾಲಿಡುತ್ತಿದೆ. ಕಾಂಗ್ರೆಸ್ ನ ಧ್ವಜ ರಾಷ್ಟ್ರೀಯ ಧ್ವಜದ ಎಲ್ಲಾ ಬಣ್ಣಗಳನ್ನು ತುಂಬಿಕೊಂಡಿದೆ. ಇದು ಬಿಜೆಪಿ ಪಕ್ಷದ್ದು ಅಂತಾ ಹೇಳಲು ಸಾಧ್ಯವಿಲ್ಲ ಎಂದರು.
ರಾಜ್ಯ ಬಿಜೆಪಿ ಸರ್ಕಾರ ಜನರ ಮನಸ್ಸನ್ನು ಗೆಲ್ಲಲು ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.