ಚಿತ್ರದುರ್ಗ: ಕೋವಿಡ್ ನಿಯಂತ್ರಣದಲ್ಲಿ ವೈಫಲ್ಯ ಹಾಗೂ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.
ಹಿರಿಯೂರಲ್ಲಿ ಮಾತನಾಡಿರುವ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ಹೆಣ ಸುಡೋಕೂ ಸರದಿ, ಆಸ್ಪತ್ರೆ ಸೇರೋಕು ಸರದಿ,ಔಷಧಿಗೂ ಸರದಿ, ಲಸಿಕೆ ಪಡೆಯಲೂ ಸರದಿ ಸಾಲು ನಿಲ್ಲುವಂತಾಯ್ತು ಬಿಜೆಪಿ ಸರ್ಕಾರ ಇನ್ನೇನು ಜನರನ್ನು ಕಾಪಾಡಿದೆ ? ಹೆಣದಲ್ಲೂ ಹಣ, ಔಷಧಿಯಲ್ಲೂ ಹಣ ಲೂಟಿ ಹೊಡೆಯುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ದೇಶಕ್ಕೆ ಕೊರೊನಾ ಖಾಯಿಲೆ ತಂದದ್ದು ಯಾರು? ನಾವು ತಂದಿದ್ದೇವಾ? ಎಂದು ಪ್ರಶ್ನಿಸಿದ ಡಿಕೆಶಿ, ಜನ ಬಿಜೆಪಿ ಸರ್ಕಾರಕ್ಕೆ ಉಗಿಯುತ್ತಿದ್ದಾರೆ ಎಂದು ಛಿಮಾರಿ ಹಾಕಿದರು.
ಐದು ಸಾವಿರ ಕಡೆ ಹೋರಾಟ :
ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಇಂಧನ ಬೆಲೆ ಖಂಡಿಸಿ ಜೂನ್ 15 ರಿಂದ ಐದು ದಿನ ಐದು ಸಾವಿರ ಕಡೆ ಜನಪರ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ ಡಿಕೆಶಿ, ಸಿಎಂ ಬಿಎಸ್ ವೈ, ಪಿಎಂ ಮೋದಿಗೆ ನನ್ನ ಪ್ರಶ್ನೆ, ತೈಲ ಬೆಲೆ ಏರಿಸಿದಂತೆ ರೈತರಿಗೆ ಬೆಂಬಲ ಬೆಲೆ ನೀಡುವುದು ಏರಿಸಿದ್ದೀರಾ? ರೈತರು ಬೆಳೆದ ಬೆಳೆಯ ಬೆಲೆ ಏರಿಸಿದ್ದೀರಾ? ಸರ್ಕಾರಿ, ಖಾಸಗಿ, ದಿನಗೂಲಿ ನೌಕರರ ಸಂಬಳ ಏರಿಸಿದ್ದೀರಾ?. ಇಲ್ಲ. ನರೇಗಾ ಕೂಲಿ ಗಣವೂ ಏರಿಸಿಲ್ಲ, ನಿಮ್ಮ ಜೇಬು ಮಾತ್ರ ತುಂಬಬೇಕು. ಜನಸಾಮಾನ್ಯರು ಸೇರಿ ಈ ಸರ್ಕಾರ ಕಿತ್ತೆಸೆಯಬೇಕೆಂದು ಆಗ್ರಹಿಸಿದರು.