ರಾಮನಗರ: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ಕುಟುಂಬ ಸಮೇತ ಮನೆದೇವರ ಪೂಜೆ ಮಾಡಿದರು. ಪತ್ನಿ ಉಷಾ ಶಿವಕುಮಾರ್, ಪುತ್ರ ಆಕಾಶ್ ಜೊತೆಗೆ ಕನಕಪುರದ ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಬಳಿಕ ಮಾತನಾಡಿದ ಡಿಕೆಶಿ, ಇಂದು ಮನೆ ದೇವರು ಕೆಂಕೇರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದೇವೆ. ನನ್ನ ಸ್ವಗ್ರಾಮದಲ್ಲಿ ಮತದಾನ ಮಾಡುತ್ತೇನೆ. ನನ್ನ ಮಗ ಆಕಾಶ್ ಕೆಂಪೇಗೌಡ ಮೊದಲನೇ ಬಾರಿಗೆ ಮತದಾನ ಮಾಡುತ್ತಿದ್ದಾನೆ. ಉತ್ಸಾಹದಿಂದ ಮತದಾನ ಮಾಡಲು ಬಂದಿದ್ದಾನೆ ಎಂದರು.
ಇದನ್ನೂ ಓದಿ:ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ: 58 ಲಕ್ಷ ರೂ. ಜಪ್ತಿ
ರಾಜ್ಯದ ಎಲ್ಲಾ ಮತದಾರರೂ ಕೂಡಾ ತಪ್ಪದೇ ಮತದಾನ ಮಾಡಬೇಕು. ರಾಜ್ಯದಲ್ಲಿ ಬದಲಾವಣೆ ತರಬೇಕು. ಯುವಕರು ವಿದ್ಯಾವಂತರಿದ್ದಾರೆ, ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಮೊದಲ ಬಾರಿಗೆ ಮತ ಹಾಕುವವರು ಹೆಚ್ಚು ಜನ ಇರುವುದು ಬಹಳ ಸಂತೋಷ, ಅವರಿಗೆ ಶುಭವಾಗಲಿ. ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು ಎಂದರು.
ಇಂದು ಮತದಾನ ನಡೆಯುತ್ತಿದೆ. 13ನೇ ತಾರೀಕು ಮತ ಎಣಿಕೆ ನಡೆಯುತ್ತದೆ. ಮತದಾರರ ಆಶೀರ್ವಾದ ಯಾರಿಗೆ ಎಂಬ ಉತ್ತರ ಸಿಗಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.