ಹೊಸಪೇಟೆ: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಭಾನುವಾರ ನಗರದಲ್ಲಿ ಗುಪ್ತ ಸಭೆ ನಡೆಸಿದ್ದಾರೆ.
ಇಲ್ಲಿನ ಹೋಟೆಲ್ ಮಲ್ಲಿಗಿ ಸಭಾಂಗಣದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಆದರೆ, ಸಭಾಂಗಣಕ್ಕೆ ಆಗಮಿಸಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸದ ಸಚಿವ ಡಿ.ಕೆ.ಶಿವಕುಮಾರ್, ತಾವು ಉಳಿದುಕೊಂಡಿದ್ದ ಕೊಠಡಿಯಲ್ಲಿಯೇ ಸಚಿವರು, ಶಾಸಕರೊಂದಿಗೆ ಗುಪ್ತ ಸಭೆ ನಡೆಸಿ ಚರ್ಚಿಸಿದರು.
ಗುಪ್ತ ಸಭೆಗೆ ಆಗಮಿಸದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ದೂರ ಇರಿಸಲಾಗಿತ್ತು. ಅಲ್ಲದೆ, ಕೆಲ ಪ್ರಮುಖ ಮುಖಂಡರನ್ನು ಮಾತ್ರ ತಮ್ಮ ಕೊಠಡಿಗೆ ಕರೆಸಿಕೊಂಡು ಚರ್ಚಿಸಿದರು. ಪಕ್ಷದ ಕೆಲ ಪದಾಧಿಕಾರಿಗಳು ಮತ್ತು ಕಾರ್ಯ ಕರ್ತರು ಮಲ್ಲಿಗಿ ಸಭಾಂಗಣದಲ್ಲಿ ಕಾಯುತ್ತಾ ಕುಳಿತಿದ್ದರೂ, ಸಚಿವ ಡಿಕೆಶಿ ಅಲ್ಲಿಗೆ ಬಂದು ಚರ್ಚೆ ನಡೆಸದೆ ತರಾತುರಿಯಲ್ಲಿ ಹೊರಟು ಹೋದರು.
ಜಾರಕಿಹೊಳಿ ದೂರ: ಭಾನುವಾರದ ಸಭೆಗೆ ಆಗಮಿಸಬೇಕಾಗಿದ್ದ ಸಚಿವ ರಮೇಶ್ ಜಾರಕಿಹೊಳಿ ಸಭೆಗೆ ಬಾರದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರವಾಗಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರೂ ಹೊಸಪೇಟೆಯ ಸಭೆಗೆ ಆಗಮಿಸದೆ ಸಭೆಯಿಂದ ದೂರ ಉಳಿಯುವ ಮೂಲಕ ತಮ್ಮ ಹಾಗೂ ಡಿಕೆಶಿ ನಡುವೆ ಇನ್ನೂ ಮುನಿಸು ಇದೆ ಎಂಬುದನ್ನು ಸಾಬೀತುಪಡಿಸಿದರು.
ಗುಪ್ತ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಯು.ಟಿ.ಖಾದರ್, ಶಾಸಕರಾದ ಆನಂದ್ ಸಿಂಗ್,ತುಕಾರಾಂ,
ರಾಘವೇಂದ್ರ ಹಿಟ್ನಾಳ್,ಅಮರೇಗೌಡ ಬಯ್ನಾಪುರ ಸೇರಿದಂತೆ ಕೆಲ ಪ್ರಮುಖ ಮುಖಂಡರು ಮಾತ್ರ ಪಾಲ್ಗೊಂಡಿದ್ದರು ಎನ್ನಲಾಗಿದೆ.