ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ಬೇರೆ ಬೇರೆ ಆಯಾಮಗಳಲ್ಲಿ ವಿಚಾರಣೆಗಳನ್ನು ಮುಂದುವರೆಸಿದ್ದಾರೆ.
Advertisement
ದೆಹಲಿಯ ಲೋಕನಾಯಕ ಭವನದಲ್ಲಿರುವ ಇಡಿ ಕಚೇರಿಯ 6 ನೇ ಮಹಡಿಯಲ್ಲಿ ಸಂಜೆ 6.30 ರಿಂದ ತಡರಾತ್ರಿಯವರೆಗೂ ಡಿ.ಕೆ.ಶಿವಕುಮಾರ್ ವಿಚಾರಣೆ ನಡೆಯುತ್ತಿದೆ.
ಇತ್ತ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗುತ್ತಿದ್ದಂತೆ, ಡಿ.ಕೆ.ಶಿವಕುಮಾರ್ ಶುಕ್ರವಾರ ಸಂಜೆ ವೇಳೆಗೆ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ದಿಲ್ಲಿಯ ಮನೆಯಲ್ಲಿ 8.59 ಕೋಟಿ ರೂ. ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಶುಕ್ರವಾರ ತಡರಾತ್ರಿಯವರೆಗೂ ವಿಚಾರಣೆ ನಡೆಸಿದರು. ಇಡಿ ಅಧಿಕಾರಿಗಳ ಮುಂದೆ ಹಾಜರಾಗಲು ಅಪರಾಹ್ನ 1 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದಿಲ್ಲಿಗೆ ತೆರಳಿದ ಡಿ.ಕೆ. ಶಿವಕುಮಾರ್, ಸಂಜೆ 6.30ರ ಸುಮಾರಿಗೆ ದಿಲ್ಲಿಯ ಲೋಕನಾಯಕ ಭವನದಲ್ಲಿರುವ ಇ.ಡಿ ಕೇಂದ್ರ ಕಚೇರಿಗೆ ತಮ್ಮ ಕೆಲ ಬೆಂಬಲಿಗರು ಹಾಗೂ ಆಪ್ತರೊಂದಿಗೆ ಆಗಮಿಸಿದರು.
Related Articles
ಇಡಿ ಕಚೇರಿ ಪ್ರವೇಶಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ಕಾನೂನಿಗೆ ಗೌರವ ಕೊಡುತ್ತೇನೆ. ಇಡಿ ಮುಂದೆ ವಿಚಾರಣೆಗೆ ಹಾಜರಾಗುವುದು ನನ್ನ ಕರ್ತವ್ಯ. ನಾವು ಶಾಸನ ರೂಪಿಸುವವರು ಹಾಗೂ ಕಾನೂನು ಪಾಲಕರು. ಇಡಿ ನನಗೆ ಸಮನ್ಸ್ ನೀಡಿದೆ. ಆದರೆ ಪಿಎಂಎಲ್‌ಎ ಕಾಯ್ದೆಯಡಿ ನನ್ನನ್ನು ಇಡಿ ವಿಚಾರಣೆಗೆ ಯಾಕೆ ಕರೆದಿದೆ ಅನ್ನುವುದು ಗೊತ್ತಿಲ್ಲ. ನಾನು ಅವರನ್ನು (ಇಡಿ ಅಧಿಕಾರಿಗಳನ್ನು) ಕೇಳುತ್ತೇನೆ ಮತ್ತು ವಿಚಾರಣೆ ಎದುರಿಸುತ್ತೇನೆ ಎಂದು ಹೇಳಿದರು. ಪಿಎಂಎಲ್‌ಎ ಕಾಯ್ದೆಯಡಿ ಶಿವಕುಮಾರ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
ಪಕ್ಷ ಮತ್ತು ನನ್ನ ತೇಜೋವಧೆ: ದಿಲ್ಲಿಗೆ ತೆರಳುವ ಮೊದಲು ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಶಿವಕುಮಾರ್, ರಾಜ್ಯಸಭಾ ಚುನಾವಣೆ ವೇಳೆ 2017ರಲ್ಲಿ ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್‌ನಲ್ಲಿ ರಕ್ಷಣೆ ನೀಡಿದ್ದಕ್ಕೆ, ಅದಕ್ಕೂ ಹಿಂದೆ ಮಹಾರಾಷ್ಟ್ರದ ಶಾಸಕರನ್ನು ಹಾಗೂ ಇತ್ತೀಚೆಗೆ ಅನೇಕ ಬಾರಿ ನಮ್ಮ ರಾಜ್ಯದ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿ ಪಕ್ಷದ ಕೆಲಸ ಮಾಡಿದ್ದಕ್ಕೆ ನನ್ನ ಮತ್ತು ಪಕ್ಷದ ತೇಜೋವಧೆ ಮಾಡಲಾಗುತ್ತಿದೆ. ಇದನ್ನು ನಾನು ಕಾನೂನಾತ್ಮಕವಾಗಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಎದುರಿಸುತ್ತೇನೆ. ಹೆದರಿ ಓಡಿ ಹೋಗುವ ಕೆಂಪೇಗೌಡರ ಮಗ ನಾನಲ್ಲ ಎಂದು ಹೇಳಿದ್ದರು.