ಶಿವಮೊಗ್ಗ: ರಾಜ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಕಾರಣ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಇಂಡಿಯಾ ಗ್ರೂಪ್ ತೃಪ್ತಿಪಡಿಸಲು, ಸ್ಟಾಲಿನ್ ತೃಪ್ತಿಪಡಿಸಲು ಸೋನಿಯಾಗಾಂಧಿ ತೃಪ್ತಿಪಡಿಸಲು ಯಾರನ್ನೂ ಕೇಳದೆ ಕದ್ದು ಮುಚ್ಚಿ ನೀರು ಬಿಟ್ಟರು ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನೀರು ಬಿಡುವ ಮುನ್ನ ಸರ್ವ ಪಕ್ಷ ಸಭೆ ಕರೆಯಬೇಕಿತ್ತು. ಅದು ಯಾವುದು ಮಾಡದೆ ಮುಟ್ಟಾಳತನ ಮಾಡಿದರು. ರೈತರ ಪರಿಸ್ಥಿತಿ ಏನು, ಬೆಳೆ ಏನು ಬೆಳೆದಿದ್ದಾರೆ, ವಸ್ತುಸ್ಥಿತಿ ಏನಿದೆ ಯಾವುದನ್ನೂ ಅವಲೋಕಿಸಿಲ್ಲ. ನಂತರ ದೆಹಲಿಗೆ ಸಿಎಂ ಅವರನ್ನು ಕರೆದುಕೊಂಡು ಹೋದರು. ದೆಹಲಿಗೆ ಹೋಗಿ ಎಲ್ಲಾ ಸಂಸದರ ಸಭೆ ಕರೆದರು. ದೆಹಲಿಯಲ್ಲಿ ಎಂಪಿಗಳು ಛೀಮಾರಿ ಹಾಕಿದ್ದಾರೆ ಎಂದರು
ಕಾವೇರಿ ನೀರು ಕಾಂಗ್ರೆಸ್, ಡಿಕೆ ಶಿವಕುಮಾರ್ ಸ್ವತ್ತಲ್ಲ. ಇದು ರಾಜ್ಯದ ಜನರ ಸ್ವತ್ತು. ಮುಖ್ಯಮಂತ್ರಿ ಅವರು ತಕ್ಷಣ ಡಿಕೆಶಿ ರಾಜೀನಾಮೆ ಪಡೆಯಬೇಕು. ಕಾನೂನು ತಜ್ಞರು, ನೀರಾವರಿ ತಜ್ಞರು, ಸಂಸದರ ವಿಶೇಷ ಸಭೆ ಕರೆಯಬೇಕು. ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬೇಕು. ಇವರು ಮಾಡಿದ ತಪ್ಪನ್ನು ಮುಚ್ಚಲು ಪ್ರಧಾನಮಂತ್ರಿ ಅವರನ್ನು ಮಧ್ಯ ತರುತ್ತಿದ್ದಾರೆ. ತಜ್ಞರ ಜೊತೆ ಸಭೆ ನಡೆಸಿದ್ದರೇ ರಾಜ್ಯಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ಇದೇ ಪರಿಸ್ಥಿತಿ ಎದುರಾಗಿತ್ತು. ಆಗ ಬಂಗಾರಪ್ಪ ಅವರು ಸರ್ವಪಕ್ಷ ಸಭೆ ಕರೆದು, ಎಲ್ಲರ ಜೊತೆ ಚರ್ಚೆ ಮಾಡಿದರು. ನೀರು ಬಿಡುವುದಿಲ್ಲವೆಂದು ಸುಗ್ರೀವಾಜ್ಞೆ ಹೊರಡಿಸಿದರು. ಆದರೆ ಡಿಕೆ ಶಿವಕುಮಾರ್ ಅವರು ಸ್ಟಾಲಿನ್, ಸೋನಿಯಾಗಾಂಧಿ ಮೆಚ್ಚಿಸಲು ಕದ್ದು ಮುಚ್ಚಿ ನೀರು ಬಿಟ್ಟು ರೈತರಿಗೆ ಸಂಕಷ್ಟ ತಂದಿಟ್ಟಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.
ಮುಖ್ಯಮಂತ್ರಿ ಅವರು ರಾಜ್ಯದ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿ. ಜಲಾಶಯದ ವಸ್ತು ಸ್ಥಿತಿ ಅರಿಯಲಿ. ಕರ್ನಾಟಕ ಸದ್ಯಕ್ಕೆ ಶಾಂತಿಯಿಂದ ಇದೆ. ಮುಂದೆ ಶಾಂತಿಯಿಂದ ಇರುತ್ತದೆಂದು ನನಗೆ ಅನಿಸಲ್ಲ ಎಂದರು.