ಬಳ್ಳಾರಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಈಗಾಗಲೇ ಆಡಿಯೋ ಬಿಡುಗಡೆ ಮಾಡಿ, ಕಾಂಗ್ರೆಸ್ ಅಧ್ಯಕ್ಷರು ಪಾತ್ರ ಸ್ಪಷ್ಟಪಡಿಸಿದ್ದಾರೆ. ಸಿಬಿಐ ತನಿಖೆ ಮಾಡುವಂತೆ ಅವರು ಒತ್ತಾಯ ಮಾಡಿದ್ದಾರೆ. ಎಲ್ಲಾ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವ ಡಿಕೆ ಶಿವಕುಮಾರ್ ಈಗ ಯಾಕೆ ಸುಮ್ಮನಿದ್ದಾರೆ? ಕೇವಲ ತಾವು ಮಾತ್ರ ಅಲ್ಲದೇ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ ನೀಡಿದಂತೆ ಬಾಯಿ ಮುಚ್ಚಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ತನಿಖೆ ಕುರಿತು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ನಿರ್ಧಾರ ಮಾಡುತ್ತಾರೆ. ಕೇವಲ ನೂರು ರೂಪಾಯಿಗೆ ನೀಲಿ ಚಿತ್ರ ತೋರಿಸುವ ವ್ಯಕ್ತಿ ಡಿಕೆಶಿ ಇಂದು ಸಾವಿರಾರು ಕೋಟಿ ಹೇಗೆ ಸಂಪಾದನೆ ಮಾಡಿದ್ದಾರೆ? ಸಿಡಿ ಕೇಸ್ ಕುರಿತು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಲಿ. ಇಲ್ಲವಾದರೆ ಕಾಂಗ್ರೆಸ್ ಮರ್ಯಾದೆ ಹೋಗುತ್ತದೆ ಎಂದರು.
ಕಾಂಗ್ರೆಸ್ ಅಂದರೆ ಕೇವಲ ಡಿಕೆ ಶಿವಕುಮಾರ್- ಸಿದ್ದರಾಮಯ್ಯ ಕಟ್ಟಿದ ಪಕ್ಷವಲ್ಲ. ಸ್ವಾತಂತ್ರ್ಯ ಹೋರಾಟಗಾರರು ಕಟ್ಟಿದ ಪಕ್ಷ ಕಾಂಗ್ರೆಸ್. ಸಿಡಿ ವಿಚಾರದಲ್ಲಿ ನಿಮ್ಮ ಪಾತ್ರ ತಿಳಿಸಿ. ನೀವು ಕೂಡ ಸಿಬಿಐ ತನಿಖೆಗೆ ಒತ್ತಾಯ ಮಾಡಿ. ಇಲ್ಲವಾದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಈಶ್ವರಪ್ಪ ಒತ್ತಾಯಿಸಿದರು.
ಇದನ್ನೂ ಓದಿ:Union Budget 2023: ಈ ಬಾರಿ ಬಜೆಟ್ ನಲ್ಲಿ ಯಾವುದು ದುಬಾರಿ, ಯಾವುದು ಅಗ್ಗ?
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕೋರ್ಟ್ ಪೊಲೀಸ್ ಇಲಾಖೆಯನ್ನು ದಾಖಲೆ ಕೇಳಿದೆ. ಅವರು ದಾಖಲೆ ಕೊಟ್ಟಿದ್ದಾರೆ. ಇದರಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಿ ಯಶಸ್ಸು ಆಗಬೇಕು ಎಂದುಕೊಂಡಿದ್ದರು, ಆದರೆ ಅದು ಆಗಲಿಲ್ಲ ಎಂದರು.
ಕೇಂದ್ರದಿಂದ ಪ್ರತಿ ಕ್ಷೇತ್ರದಲ್ಲಿ ಸರ್ವೇ ಮಾಡಲಾಗುತ್ತಿದೆ. ಸಾಮಾನ್ಯ ಕಾರ್ಯಕರ್ತರು ಅಭಿಪ್ರಾಯದ ಮೇಲೆ ಟಿಕೆಟ್ ನಿರ್ಧಾರ ಮಾಡಲಾಗುವುದು ಎಂದು ಈಶ್ವರಪ್ಪ ಹೇಳಿದರು.