Advertisement

ಡಿಕೆಶಿಗೆ ಷರತ್ತುಬದ್ಧ ಜಾಮೀನು

06:00 AM Sep 16, 2018 | Team Udayavani |

ಬೆಂಗಳೂರು: ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸೇರಿ ಇತರೆ ಮೂವರು ಆರೋಪಿಗಳಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಶನಿವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ದೆಹಲಿಯ ಅಪಾರ್ಟ್‌ಮೆಂಟ್‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 8.59 ಕೋಟಿ ರೂ. ಜಪ್ತಿ ಮಾಡಿದ್ದರು. ಈ ಹಣ ಡಿ.ಕೆ. ಶಿವಕುಮಾರ್‌ ಅವರಿಗೆ ಸೇರಿದ್ದು ಎನ್ನಲಾಗಿದೆ.

ಪ್ರಕರಣದ ಮೊದಲ ಆರೋಪಿ ಸಚಿವ ಡಿ.ಕೆ ಶಿವಕುಮಾರ್‌, ಉದ್ಯಮಿ ಸುನೀಲ್‌ ಶರ್ಮಾ, ಆಂಜನೇಯ ಮತ್ತು ರಾಜೇಂದ್ರಗೆ ಶನಿವಾರ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾ. ಎಂ.ಎಸ್‌ ಆಳ್ವ ಜಾಮೀನು ಮಂಜೂರು ಮಾಡಿದ್ದಾರೆ. ಇದೇ ವೇಳೆ ಆರೋಪಿಗಳು ತಲಾ 25 ಸಾವಿರ ರೂ. ಶ್ಯೂರಿಟಿ ಮತ್ತು 1 ಲಕ್ಷ ರೂ. ಬಾಂಡ್‌ ನೀಡಬೇಕು. ಯಾವುದೇ ಸಂದರ್ಭದಲ್ಲಿಯೂ ಸಾಕ್ಷ್ಯ ನಾಶ ಯತ್ನ ಮಾಡಬಾರದು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದ್ದಾರೆ.

ಏನಿದು ಪ್ರಕರಣ?: 2017ರಲ್ಲಿ ಸಚಿವ ಶಿವಕುಮಾರ್‌ ಮತ್ತವರ ಆಪ್ತರ ಮನೆಗಳು ಮತ್ತು ಕಚೇರಿಗಳು ಸೇರಿ 60 ಕಡೆಗಳಲ್ಲಿ  ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ದೆಹಲಿಯಲ್ಲಿರುವ ಶಿವಕುಮಾರ್‌ಗೆ ಸೇರಿದ ಫ್ಲಾಟ್‌ಗಳ ಮೇಲೂ ದಾಳಿ ನಡೆಸಿದ್ದರು. ಈ ವೇಳೆ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿಚಾರಣೆಗೆ ಹಾಜರಾದ ಸಚಿವರು ಹಣದ ಮೂಲದ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು ಎಂಬ ಆರೋಪವಿದೆ.

ಸ್ಥಳದಲ್ಲಿ ಸಿಕ್ಕ ದಾಖಲೆಗಳು ಹಾಗೂ ಸಚಿವರ ಹೇಳಿಕೆಗೆ ವ್ಯತ್ಯಾಸ ಕಂಡ ಬಂದ  ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಸಚಿವರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌ ನಾಲ್ವರಿಗೂ ಮಧ್ಯಂತರ ಜಾಮೀನು ನೀಡಿತ್ತು.

Advertisement

ವಾದ-ಪ್ರತಿವಾದ
ಇದಕ್ಕೂ ಮೊದಲು ಆದಾಯ ತೆರಿಗೆ ಇಲಾಖೆ ಪರ ವಾದ ಮಂಡಿಸಿದ ವಕೀಲ ಎ.ಎ.ಜಿ.ಪ್ರಭುಲಿಂಗ ನಾವಡಗಿ, ಐಟಿ ದಾಳಿ ವೇಳೆ ಕೋಟ್ಯಂತರ ರೂ. ಹಣ ಪತ್ತೆಯಾಗಿದ್ದು, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರೆ, ದೇಶ ಬಿಟ್ಟು ಹೋಗಬಹುದು. ಅಂತಹ ಹತ್ತಾರು ಪ್ರಕರಣಗಳು ನಡೆದಿವೆ. ಉದ್ದೇಶಪೂರ್ವಕವಾಗಿಯೇ ಕೃತ್ಯವೆಸಗಿದ್ದಾರೆ. ಅಲ್ಲದೆ ವಿಚಾರಣೆ ಸಂದರ್ಭದಲ್ಲಿಯೂ ತಪ್ಪು ಮಾಹಿತಿ ನೀಡಿ, ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಿದ್ದಾರೆ. ಹೀಗಾಗಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಶಿವಕುಮಾರ್‌ ಪರ ವಕೀಲ ಶೇಷಾಚಲ, ಐಟಿ ಅಧಿಕಾರಿಗಳು ಜಪ್ತಿ ಮಾಡಿದ ಹಣಕ್ಕೆ ಸೂಕ್ತ ಲೆಕ್ಕ ಕೊಡಲು ನಮ್ಮ ಕಕ್ಷಿದಾರರು ಸಿದ್ದರಿದ್ದಾರೆ. 2018-19 ಆರ್ಥಿಕ ವರ್ಷದ ಲೆಕ್ಕಚಾರ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಈ ಸಾಲಿನ ವಹಿವಾಟಿನ ಬಗ್ಗೆ ಆಡಿಟಿಂಗ್‌ ನಡೆದಿಲ್ಲ. ಜತೆಗೆ ಇದು ಗಂಭೀರ ಪ್ರಕರಣ ಅಲ್ಲ. ಹೀಗಾಗಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಕೈ ಮುಗಿದ ಸಚಿವರು
ಪ್ರಕರಣ ಸಂಬಂಧ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಚಿವ ಡಿ.ಕೆ.ಶಿವಕುಮಾರ್‌ ಖುದ್ದು ನ್ಯಾಯಾಲಯಕ್ಕೆ ಹಾಜರಾದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿತು. ಈ ಹಿನ್ನೆಲೆಯಲ್ಲಿ ಸಂತೋಷದಿಂದಲೇ ಕೋರ್ಟ್‌ ಆವರಣದಿಂದ ಹೊರಬಂದು ಸಚಿವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಕೈ ಮುಗಿದು ಹೊರಟರು.

Advertisement

Udayavani is now on Telegram. Click here to join our channel and stay updated with the latest news.

Next