Advertisement

ಮಠಗಳ ಅನುದಾನಕ್ಕೆ ಶೇ.30 ಕಮೀಷನ್‌ ಆರೋಪ ಉತ್ತರಿಸಲು ಸಿಎಂಗೆ ಡಿಕೆಶಿ ಸವಾಲು

05:17 PM Apr 18, 2022 | Team Udayavani |

ಬೆಂಗಳೂರು: ಮಠಗಳಿಗೆ ನೀಡುವ ಅನುದಾನದಲ್ಲೂ ಶೇ.30 ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ ಎಂಬ ದಿಂಗಾಲೇಶ್ವರ ಶ್ರೀಗಳ ಆರೋಪ ಕುರಿತು ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಮಾನ್ಯ ಮುಖ್ಯಮಂತ್ರಿಗಳೇ ಇದಕ್ಕೇನಂತೀರಿ, ಉತ್ತರ ಕೊಡಿ ಈ ಅನ್ಯಾಯಕ್ಕೆ ಯಾರು ಹೊಣೆ, ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಎಸಿಬಿ ಇನ್ನೂ ಜೀವಂತವಾಗಿದೆಯೇ, ಧರ್ಮ ರಕ್ಷಣೆ ಎನ್ನುವುದು ಮುಖವಾಡ. ಭ್ರಷ್ಟಾಚಾರ ಅಸಲಿ ಮುಖವೇ ಎಂದು ಕೇಳಿದ್ದಾರೆ.

ದಿನ ನಿತ್ಯ ಇಂತಹ ಪ್ರಕರಣಗಳು ಹೊರಬರುತ್ತಿವೆ. ಮಾಹಿತಿ ತಂತ್ರಜ್ಞಾನ, ನವೋದ್ಯಮ ರಾಜಧಾನಿಯಾಗಿದ್ದ ಕರ್ನಾಟಕವನ್ನು ಭ್ರಷ್ಟಾಚಾರ ರಾಜಧಾನಿಯನ್ನಾಗಿ ಮಾಡಿದ್ದಾರೆ. ಇದು ಕೇವಲ ರಾಜ್ಯದ್ದು ಮಾತ್ರವಲ್ಲ, ದೇಶದ ಘನತೆ ಪ್ರಶ್ನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮಸೀದಿಯಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತದೆಯೋ? ಇನ್ನೂ ತಗ್ಗಿಬಗ್ಗಿ ಇರಬೇಕೆ: ಪೇಜಾವರ ಶ್ರೀ

Advertisement

ಯಾರ ಕಾಲದಲ್ಲೂ ನಡೆದಿರಲಿಲ್ಲ
ಪೊಲೀಸ್‌ ನೇಮಕಾತಿಯಲ್ಲಿ ಅಕ್ರಮ ಕುರಿತು ಪ್ರತಿಕ್ರಿಯಿಸಿರುವ ಅವರು, ಯಾರ ಕಾಲದಲ್ಲೂ ಇಷ್ಟೊಂದು ಹಗರಣ ನಡೆದಿರಲಿಲ್ಲ ಎಂದು ಹೇಳಿದ್ದಾರೆ.

ಪೊಲೀಸ್‌ ನೇಮಕಾತಿಯಲ್ಲಿ ಅಕ್ರಮ ಹಾಗೂ ಸಿಐಡಿ ತನಿಖೆ ವಿಚಾರವಾಗಿ ನಾನು, ಪ್ರಿಯಾಂಕ್‌ ಖರ್ಗೆ ಅಭ್ಯರ್ಥಿಗಳ ಜತೆ ಮಾತನಾಡಿದ್ದೇವೆ. ಯಾವ ಕಾಲದಲ್ಲೂ ಇಂತಹ ಅಕ್ರಮ ನಡೆದಿರಲಿಲ್ಲ. ಈ ಹಿಂದೆ ಕೆಲವು ಅಕ್ರಮ ನೋಡಿದ್ದೇವೆ. ನಾನು ಕೂಡ ಇಂಧನ ಸಚಿವ ಆಗಿದ್ದಾಗ 30-40 ಸಾವಿರ ಹುದ್ದೆಗಳ ಭರ್ತಿ ಮಾಡಿದ್ದು, ದೈಹಿಕ ಪರೀಕ್ಷೆಯನ್ನು ವಿಡಿಯೋ ಮಾಡಿಸಿದ್ದೆ. ಒಬ್ಬರೂ ನಮ್ಮ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿಲ್ಲ. ನನ್ನ ಕ್ಷೇತ್ರದವರಿಗೆ ಲೈನ್‌ ಮ್ಯಾನ್‌ ಕೆಲಸ ಕೊಡಿಸಲು ಆಗಲಿಲ್ಲ, ಅಷ್ಟು ಪಾರದರ್ಶಕವಾಗಿ ನೇಮಕಾತಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಈ ನೇಮಕಾತಿ ಪರೀಕ್ಷೆಯಲ್ಲಿ 21 ಪ್ರಶ್ನೆಗೆ ಉತ್ತರ ಬರೆದ ಅಭ್ಯರ್ಥಿಗೆ 7ನೇ ರಾಂಕ್‌ ನೀಡಲಾಗಿದೆ. ಅದರ ದಾಖಲೆಗಳು ನನ್ನ ಬಳಿ ಇವೆ. 52 ಸಾವಿರ ಯುವಕರು ಪರೀಕ್ಷೆ ಬರೆದಿದ್ದಾರೆ. ಇಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಿದ್ದಾರೋ ಇಲ್ಲವೋ, ಆದರೆ ಗೃಹಮಂತ್ರಿಗಳು ಅಕ್ರಮ ನಡೆದಿಲ್ಲ ಎಂದು ಹೇಳಿ ಸಿಐಡಿ ತನಿಖೆ ಮಾಡಿಸುತ್ತಿದ್ದಾರೆ. ಈ ವಿಚಾರವಾಗಿ ಯುವಕರು ದೊಡ್ಡ ಆಂದೋಲನ ರೀತಿಯಲ್ಲಿ ಹೋರಾಟ ಮಾಡಬೇಕಿದೆ ಎಂದು ಹೇಳಿದ್ದಾರೆ.

ಕಾಮಗಾರಿಗಳಲ್ಲಿ 40 ಪರ್ಸೆಂಟ್‌ ಕಮಿಷನ್‌ ಭ್ರಷ್ಟಾಚಾರ ಆದರೆ, ನೇಮಕಾತಿಯಲ್ಲಿ ಈ ರೀತಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದರಲ್ಲಿ ಬಿಜೆಪಿ ನಾಯಕರೇ ಶಾಮೀಲಾಗಿದ್ದು, ಈ ಭ್ರಷ್ಟ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿ ಮಾಡುತ್ತಿದೆ. ಇಡೀ ಸರ್ಕಾರವೇ ಇದರಲ್ಲಿ ಭಾಗಿಯಾಗಿದೆ ಎಂದು ದೂರಿದ್ದಾರೆ,

Advertisement

Udayavani is now on Telegram. Click here to join our channel and stay updated with the latest news.

Next