ಬೆಂಗಳೂರು : ಆಪರೇಷನ್ ಕಮಲ ಭೀತಿಯಲ್ಲಿ ಬಿಡದಿಯ ಈಗಲ್ ಟನ್ ರೆಸಾರ್ಟ್‌ನಲ್ಲಿ ತಂಗಿದ್ದ ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ಸಚಿವ ಡಿ.ಕೆ.ಶಿವಕುಮಾರ್ ಅವರು ಶನಿವಾರ ವಿಧಾನಸೌಧಕ್ಕೆ ಕರೆ ತಂದರು.
ಐಟಿ ಅಧಿಕಾರಿಗಳ ದಿಢೀರ್ ದಾಳಿಯಿಂದ ಕಂಗಾಲಾಗಿದ್ದ ಶಾಸಕರು ಇಂದು ಬೆಳಗ್ಗೆ ರಾಜ್ಯಪಾಲ ಗುಜರಾತ್ ಮೂಲದ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆ ಬಳಿಕ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಾಗಾœಳಿ ನಡೆಸಿದರು.
ಐಟಿ ಪರಿಶೀಲನೆ ಮುಗಿದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ವಾಪಾಸಾದ ಸಚಿವ ಡಿ.ಕೆ.ಶಿವಕುಮಾರ್ ಅವರು ಶಾಸಕರೊಂದಿಗೆ ವಿಧಾನಸೌಧ ಎದುರಿನ ಗಾಂಧಿ ಪ್ರತಿಮೆ ಬಳಿ ರಘುಪತಿ ರಾಘವ ರಾಜಾರಾಮ್..ಭಜನೆಯನ್ನು ಹಾಡಿ ಗಮನ ಸೆಳೆದರು.
ಶಾಸಕರಿಗೆ ವಿಧಾನಸೌಧದ ಕಾರ್ಯವೈಖರಿಯ ಬಗ್ಗೆ ವಿವರಿಸಬೇಕಿತ್ತು, ಕರೆದುಕೊಂಡು ಬಂದಿದ್ದೇನೆ. ಅವರೆಲ್ಲರೂ ಇಲ್ಲಿ ಖುಷಿಯಿಂದ ಇದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಶಾಸಕರು ನಮಗೆ ಬಿಜೆಪಿ 15 ಕೋಟಿ ರೂಪಾಯಿ ಆಮಿಷ ಒಡ್ಡಿತ್ತು. ಅದನ್ನು ಬಿಟ್ಟು ಇಲ್ಲಿ ಬಂದಿದ್ದೇವೆ. ನಮ್ಮ ಕುರಿತಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನಾವೆಲ್ಲ ಇಲ್ಲಿ ಕ್ಷೇಮವಾಗಿದ್ದೇವೆ, ಪ್ರಜಾಪ್ರಭುತ್ವದ ಉಳಿವಿಗಾಗಿ ಇಲ್ಲಿ ಉಳಿದುಕೊಂಡಿದ್ದೇವೆ ಎಂದರು.