Advertisement

ಪ್ರಿಯಾಂಕಾ ಗಾಂಧಿ ಅವರ ಹಕ್ಕನ್ನು ಕಸಿದದ್ದು ಇಡೀ ಭಾರತೀಯ ಸಂಸ್ಕೃತಿಗೆ ಮಾಡಿದ ಅಪಮಾನ: ಡಿಕೆಶಿ

11:38 AM Oct 05, 2021 | Team Udayavani |

ಮಂಗಳೂರು: ‘ನಾನು ಇಂಧನ ಸಚಿವನಾಗಿದ್ದ ಸಂದರ್ಭದಲ್ಲಿ ಯಾವುದೋ ವ್ಯಕ್ತಿ ಕರೆ ಮಾಡಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನಂತರ ಅಧಿಕಾರಿಗಳು ದೂರು ದಾಖಲಿಸಿದ್ದರು. ನಂತರ ಆತ ಆ ಅಧಿಕಾರಿಗಳಿಗೂ ನಿಂದನೆ ಮಾಡಿದ್ದ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಬರಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಮೊದಲ ಬಾರಿಗೆ ನನಗೆ ತಿಳಿದಿರಲಿಲ್ಲ. ಹೀಗಾಗಿ ನ್ಯಾಯಾಲಯಕ್ಕೆ ತಲೆಬಾಗಿ ಈಗ ಆಗಮಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

Advertisement

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ, ಪ್ರತಿಭಟನೆ ನಮ್ಮ ಹಕ್ಕು. ಅಹಿಂಸೆ ಮಾರ್ಗದಲ್ಲಿ ಹೋರಾಟ ಮಾಡುವುದು ಗಾಂಧೀಜಿ ಅವರು ನಮಗೆ ಹೇಳಿಕೊಟ್ಟ ಪಾಠ. ರೈತರು ಕಳೆದ 10 ತಿಂಗಳಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದು, ಪ್ರಧಾನಮಂತ್ರಿಗಳಾಗಲಿ, ಮಂತ್ರಿಗಳಾಗಲಿ ಯಾರೂ ರೈತರನ್ನು ಭೇಟಿ ಮಾಡಿ ಮಾತನಾಡಿಲ್ಲ ಎಂದರು.

ಕೇಂದ್ರ ಸಚಿವರ ಮಗ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿ 4 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನ ದಾಳಿ ಮಾಡಿದ್ದಾರೆ. ಇದು ಕೂಡ ನಡೆಯಬಾರದ ಘಟನೆ. ಆದರೆ ಇದಕ್ಕೆ ಕಾರಣರಾದವರನ್ನು ಬಂಧಿಸಿಲ್ಲ, ಮಂತ್ರಿ ರಾಜೀನಾಮೆ ನೀಡಿಲ್ಲ, ಇದು ಒಂದು ಸರ್ಕಾರನಾ? ಎಂದು ಪ್ರಶ್ನಿಸಿದರು.

ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಮುಂದಾಗಿದ್ದ ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಸಾಂತ್ವನ ಹೇಳುವುದು ರಾಜಕೀಯ ಕರ್ತವ್ಯ. ಅದನ್ನು ಮಾಡಲು ಹೋದರೆ ಪುರುಷ ಪೊಲೀಸ್ ಅಧಿಕಾರಿಗಳು ಎಳೆದಾಡಿ ಅವರ ಹಕ್ಕನ್ನು ಕಸಿದಿದ್ದಾರೆ. ಇದು ಇಡೀ ಭಾರತೀಯ ಸಂಸ್ಕೃತಿಗೆ ಮಾಡಿದ ಅಪಮಾನ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next