Advertisement

ಲಿಂಗಾಯತ ಧರ್ಮ ವಿಚಾರ; ಡಿಕೆಶಿ ಕ್ಷಮೆಯಾಚನೆ, ಕೈ ನಾಯಕರ ಆಕ್ರೋಶ

03:44 PM Oct 18, 2018 | Sharanya Alva |

ಗದಗ/ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ, ಸಚಿವ ಡಿಕೆ ಶಿವಕುಮಾರ್ ಅವರು, ನಮ್ಮ ಸರ್ಕಾರ ದೊಡ್ಡ ತಪ್ಪು ಮಾಡಿದ್ದು, ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ರಾಜಕೀಯವಾಗಿ ಮತ್ತೆ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ.

Advertisement

ನಡೆದಿದ್ದೇನು?

ಗದಗದ ಲಕ್ಷ್ಮೇಶ್ವರದಲ್ಲಿ ರಂಭಾಪುರಿಶ್ರೀಗಳ ದಸರಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಜನಸಂಪನ್ಮೂಲ ಸಚಿವ ಡಿಕೆಶಿ ಮಾತನಾಡುತ್ತ, ನಮ್ಮ ಸರ್ಕಾರ ರಾಜ್ಯದಲ್ಲಿ ಒಂದು ದೊಡ್ಡ ತಪ್ಪು ಮಾಡಿದೆ. ಯಾವುದೇ ರಾಜಕಾರಣಿಯಾಗಲಿ, ಸರ್ಕಾರವಾಗಲಿ ಧರ್ಮ, ಸಂಸ್ಕೃತಿ, ಜಾತಿ ವಿಚಾರದಲ್ಲಿ ಕೈಹಾಕಬಾರದು ಎಂದು ಹೇಳುತ್ತೇನೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು.

ಯಾವುದೇ ಸರ್ಕಾರಗಳು ಕೂಡಾ ಧರ್ಮದ ವಿಚಾರದಲ್ಲಿ ಮಧ್ಯಪ್ರವೇಶಿಸಬಾರದು. ಅದರ ಅರಿವು ನಮಗಾಗಿದೆ ಎಂದು ಬಹಿರಂಗವಾಗಿ ತಪ್ಪೊಪ್ಪಿಕೊಂಡಿದ್ದರು.

ಎಂಬಿ ಪಾಟೀಲ್ ತಿರುಗೇಟು:

Advertisement

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಿಂದಾಗಿ ಸರ್ಕಾರಕ್ಕೆ ಏನೂ ಆಗಿಲ್ಲ. ಡಿಕೆ ಶಿವಕುಮಾರ್ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ. ಅವರು ದಕ್ಷಿಣ ಕರ್ನಾಟಕದ ನಾಯಕನಾಗಿ ಎಷ್ಟು ಸ್ಥಾನ ಗೆಲ್ಲಿಸಿಕೊಟ್ಟಿದ್ದಾರೆ. ಲಿಂಗಾಯತ, ಒಕ್ಕಲಿಗ ಪ್ರಶ್ನೆಯಲ್ಲ. ಹಲವಾರು ವರ್ಷಗಳಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಡೆಯುತ್ತಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಂಬಿ ಪಾಟೀಲ್ ತಿರುಗೇಟು ನೀಡಿದ್ದರು.

ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಹೇಳಿಕೆ ನೀಡಿದ್ದೇನೆ: ಡಿಕೆಶಿ

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ತಪ್ಪು ಹೆಜ್ಜೆ ಇಟ್ಟಿರುವುದಕ್ಕೆ ಕ್ಷಮೆಯಾಚಿಸಿದ್ದ ಡಿಕೆ ಶಿವಕುಮಾರ್ ಅವರ ಹೇಳಿಕೆ ವಾಕ್ಸಮರಕ್ಕೆ ಗುರಿಯಾದ ಬೆನ್ನಲ್ಲೇ ತಮ್ಮ ಹೇಳಿಕೆಯನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ನನ್ನ ಆತ್ಮಸಾಕ್ಷಿಯಿಂದ ತಿಳಿದು ನಾನು ಆ ಹೇಳಿಕೆ ನೀಡಿದ್ದೇನೆ. ಹಿಂದೆ ಮಾಡಿದ್ದ ತಪ್ಪಿನ ಅರಿವು ಈಗಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಪ್ರಸ್ತಾಪವಾದಾಗ ಅದನ್ನು ತಡೆಯಬೇಕಾಗಿತ್ತು. ಸಂಪ್ರದಾಯ, ಸಂಸ್ಕೃತಿ, ಧರ್ಮದ ವಿಚಾರದಲ್ಲಿ ನಾವು ಸೂಕ್ಷ್ಮವಾಗಿರಬೇಕು. ಹೀಗಾಗಿ ಈ ಬಗ್ಗೆ ಚರ್ಚಿಸಿ ನಾನು ನನ್ನ ಆತ್ಮಸಾಕ್ಷಿಯನ್ನು ಗಮನದಲ್ಲಿಟ್ಟುಕೊಂಡು ರಂಬಾಪುರಿಶ್ರೀಗಳ ದಸರಾ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಹೇಳಿ, ನಾವು ಮಾಡಿದ್ದ ತಪ್ಪನ್ನು ಒಪ್ಪಿಕೊಂಡಿದ್ದೇನೆ. ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ನನ್ನಿಂದ ಏನೂ ಆಗಲ್ಲ, ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next