ಬೆಂಗಳೂರು: ಕಾಂಗ್ರೆಸ್ ನವಸಂಕಲ್ಪ ಚಿಂತನಾ ಶಿಬಿರದ ನಡುವೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ “ರಹಸ್ಯ’ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಚಿಂತನ ಶಿಬಿರದ ಮಧ್ಯೆ ನಿರ್ಗಮಿಸಿ ಮಾಜಿ ಶಾಸಕ ಅಶೋಕ್ ಪಟ್ಟಣ್ ಕಾರಿನಲ್ಲಿ ತೆರಳಿದ ಇಬ್ಬರೂ ಸುಮಾರು ಎರಡು ಗಂಟೆಗಳ ಕಾಲ ಪ್ರತ್ಯೇಕವಾಗಿ ಚರ್ಚಿಸಿರುವುದು ಕಾಂಗ್ರೆಸ್ ವಲಯದಲ್ಲೂ ಅಚ್ಚರಿ ಮೂಡಿಸಿದೆ.
ಇಬ್ಬರ ನಡುವೆ ಬಣ ರಾಜಕೀಯ ಹಾಗೂ ಇತರೆ ವಿಚಾರಗಳಲ್ಲಿನ ಭಿನ್ನಾಭಿಪ್ರಾಯ ಪಕ್ಷದ ಮೇಲೆ ಪರಿಣಾಮ ಬೀರುತ್ತಿದ್ದು ಅದೇ ಬಿಜೆಪಿ ಹಾಗೂ ಜೆಡಿಎಸ್‌ಗೆ ಅಸ್ತ್ರವಾಗುತ್ತಿದೆ. ಹೀಗೇ ಮುಂದುವರಿದರೆ ನಾವು ಅಧಿಕಾರಕ್ಕೆ ಬರುವುದು ಕಷ್ಟ. ಏನೇ ಭಿನ್ನಾಭಿಪ್ರಾಯ ಇದ್ದರೂ ಮರೆತು ಒಟ್ಟಾಗಿ ಮುಂದುವರಿಯೋಣ. ಬೇರೆಯವರಿಗೆ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುವುದು ಬೇಡ ಎಂಬ ಬಗ್ಗೆ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಟಿಕೆಟ್ ವಿಚಾರದಲ್ಲಿಯೂ ತಮ್ಮಿಬ್ಬರ ಅಭಿಪ್ರಾಯಕ್ಕೆ ಸಂಪೂರ್ಣ ಮನ್ನಣೆ ಸಿಕ್ಕಿಲ್ಲ. ಆದರೆ, ಆಕಾಂಕ್ಷಿಗಳ ಆಕ್ರೋಶಕ್ಕೆ ನಾವು ತುತ್ತಾಗಬೇಕಾಗಿದೆ. ನಾವು ಇಬ್ಬರೂ ಜತೆಯಾಗಿದ್ದರೆ ಇಂತದ್ದಕ್ಕೆ ಅವಕಾಶ ಇರುವುದಿಲ್ಲ. ಅಗತ್ಯವಾದರೆ ಇಬ್ಬರೂ ಸೇರಿಯೇ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡೋಣ. ರಾಜ್ಯದ ವಿಚಾರದಲ್ಲಿ ಇಬ್ಬರಿಗೆ ಅಧಿಕಾರ ನೀಡುವಂತೆ ಪ್ರಸ್ತಾಪ ಇಡೋಣ ಎಂಬ ನಿರ್ಧಾರಕ್ಕೂ ಬರಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಇಬ್ಬರೂ ಜತೆಗೂಡಿ ಕೆಲಸ ಮಾಡಿದರೆ ಅಧಿಕಾರ ಹಿಡಿಯುವುದು ಕಷ್ಟವಲ್ಲ. ಅಧಿಕಾರಕ್ಕೆ ಬಂದ ನಂತರ ಮುಂದೇನು ಎಂಬುದರ ಬಗ್ಗೆ ಪರಸ್ಪರ ಒಮ್ಮತದ ನಿರ್ಧಾರ ಕೈಗೊಳ್ಳೋಣ. ಆದರೆ, ಈಗ ಒಗ್ಗಟ್ಟಾಗಿ ಸಂದೇಶ ರವಾನಿಸೋಣ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಚಿಂತನ ಶಿಬಿರದ ನಂತರ ಮತ್ತೂಮ್ಮೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರಸ್ಪರ ಕುಳಿತು ಮಾತನಾಡಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜತೆಯೂ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಹೈಕಮಾಂಡ್ ಮೂರನೇ ವ್ಯಕ್ತಿಯ ಬಗ್ಗೆ ಯೋಚಿಸುತ್ತದೆ. ಆಗ, ಇಬ್ಬರಿಗೂ ಅಧಿಕಾರ ಸಿಗಲ್ಲ. ಪಕ್ಷವೂ ಅಧಿಕಾರಕ್ಕೆ ಬರುವುದು ಕಷ್ಟ. ಮೊದಲು ನೀವು ಒಗ್ಗಟ್ಟಾಗಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಎಚ್.ಡಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಜಮೀರ್ ಅಹಮದ್, ನಸೀರ್ ಅಹಮದ್ ಸಹಿತ ಹಲವು ಆಪ್ತ ರು ಇಬ್ಬರ ಮೇಲೂ ಒತ್ತಡ ಹೇರಿದ್ದರು. ಅದರ ಫಲವಾಗಿಯೇ ಈ ಪ್ರತ್ಯೇಕ ಮಾತುಕತೆ ಎಂದು ಹೇಳಲಾಗಿದೆ.