ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕಾಗಿ ಒಕ್ಕಲಿಗ ಸಮುದಾಯದ ನಾಯಕರಲ್ಲಿ ಭಾರಿ ಪೈಪೋಟಿ ಆರಂಭವಾಗಿದ್ದು, ರಾಮನಗರದಲ್ಲಿ ನಾಡ ದೇವಿ ಚಾಮುಂಡೇಶ್ವರಿ ಹೆಸರಿನಲ್ಲಿ ಭಾವನಾತ್ಮಕ ದಾಳ ಉರುಳಿಸಲಾಗಿದೆ.
ತಮ್ಮಜನ್ಮಭೂಮಿ ರಾಮನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಾಯಿ ಚಾಮುಂಡೇಶ್ವರಿಯ ಕೃಪೆ ಹಾಗೂ ನಿಮ್ಮ ಆಶೀರ್ವಾದದಿಂದ ನನಗೆ ಒಂದು ಅವಕಾಶ ಇದೆ ಎಂದು ಹೇಳಿದ್ದಾರೆ. ಆದರೆ ರಾಮನಗರವನ್ನು ತಮ್ಮ ಕರ್ಮಭೂಮಿಯಾಗಿಸಿಕೊಂಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಾಯಿ ಚಾಮುಂಡೇಶ್ವರಿ ಇಚ್ಛೆ ಬೇರೆ ಇದೆ. ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು ಕೋಳಿ ಫಾರಂ ಸಿಬ್ಬಂದಿಗಳ ಮೇಲೆ ಹಲ್ಲೆ: ಆರೋಪಿಗಳ ವಿರುದ್ದ ಗೂಂಡಾ ಕಾಯ್ದೆ ದಾಖಲು
ಮೈಸೂರಿನಲ್ಲಿ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದ ಪರವಾಗಿ ಭಾವನಾತ್ಮಕ ದಾಳ ಉರುಳಿಸಿದ ನಂತರ ಒಕ್ಕಲಿಗ ನಾಯಕರಲ್ಲಿ ಪೈಪೋಟಿ ಆರಂಭವಾಗಿದೆ. ಒಕ್ಕಲಿಗ ಸಮುದಾಯ ಇನ್ನೂ ದೇವೇಗೌಡರ ಜತೆಯೇ ಇದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದರು.
ಇದಾದ ಬಳಿಕ ರಾಮನಗರದಲ್ಲಿ ಮತ್ತೊಮ್ಮೆ ಮಾತನಾಡಿರುವ ಕುಮಾರಸ್ವಾಮಿ “ನನಗೆ ತಾಯಿ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆ.ಈ ನಾಡಿನಲ್ಲಿ ತುಂಬಾ ಜನ ಸಿಎಂ ಆಗಬೇಕೆಂದು ಆಕಾಂಕ್ಷೆ ಇದೆ. ಆದರೆ ತಾಯಿ ಚಾಮುಂಡೇಶ್ವರಿ ಹಾಗೂ ಭಗವಂತನ ಇಚ್ಛೆ ಬೇರೆ ಇದೆ. ಆದರೆ ನಿಮ್ಮ ಆಶೀರ್ವಾದ ಇದ್ದರೆ ಜೆಡಿಎಸ್ ಅಧಿಕಾರಕ್ಕೆ ಬಂದು ತಾನು ಮುಖ್ಯಮಂತ್ರಿಯಾಗುತ್ತೇನೆ ” ಎಂದು ಹೇಳಿದ್ದಾರೆ.