Advertisement

ಕಾಂಗ್ರೆಸ್ ಕೇವಲ ಅಧಿಕಾರವಲ್ಲ, ಇದೊಂದು ಆಂದೋಲನ: ಡಿ.ಕೆ ಶಿವಕುಮಾರ್

05:08 PM Jul 21, 2020 | sudhir |

ಬೆಂಗಳೂರು: ಕೆಪಿಸಿಸಿ ವೈದ್ಯ ಘಟಕದ ಹಮ್ಮಿಕೊಳ್ಳಲಾಗಿರುವ ಕೋವಿಡ್ ನಿರ್ವಹಣೆ ಪಡೆಯ ತರಬೇತಿ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಂಗಳವಾರ ಚಾಲನೆ ನೀಡಿದರು.

Advertisement

ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಆರೋಗ್ಯ ಹಸ್ತ ಪ್ರಾಯೋಗಿಕ ಕಾರ್ಯಕ್ರಮವನ್ನು ಈ ಕ್ಷೇತ್ರದಿಂದ ಆರಂಭಿಸುತ್ತಿದ್ದು, ಮುಂದಿನ ಕೆಲವು ದಿನ ಈ ತರಬೇತಿ ಕಾರ್ಯಕ್ರಮವನ್ನು ಬೇರೆ ಬೇರೆ ಕಡೆ ಹಮ್ಮಿಕೊಳ್ಳುತ್ತೇವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ತರಬೇತಿ ಕಾರ್ಯಕ್ರಮ ಮುಗಿದ ನಂತರ ಎಲ್ಲ ಪಂಚಾಯಿತಿಗಳಿಗೂ ಹೋಗಿ ಅಲ್ಲಿ ಪ್ರಾಥಮಿಕ ತಪಾಸಣೆ ನಡೆಸಲು ಎಲ್ಲ ತಾಲ್ಲೂಕು ಹಾಗೂ ಬ್ಲಾಕ್ ಮಟ್ಟದವರ ಜತೆ ನಿನ್ನೆ ಮಾತನಾಡಿದ್ದೇನೆ ಎಂದರು.

ಈ ತಪಾಸಣೆ ವೇಳೆ ನಾವು ಯಾವುದೇ ಔಷಧ ನೀಡುವುದಿಲ್ಲ. ಥರ್ಮಲ್ ಮೀಟರ್ ಹಾಗೂ ಆಕ್ಸಿಜನ್ ಮೀಟರ್ ಮೂಲಕ ಅವರ ಆರೋಗ್ಯ ತಪಾಸಣೆ ಮಾಡುವುದು. ಅವರಲ್ಲಿ ಧೈರ್ಯ ತುಂಬುವ ಕೆಲಸ ಇದಾಗಿದೆ. ಒಂದು ವೇಳೆ ಯಾರಲ್ಲಾದರೂ ಉಷ್ಣಾಂಶ ಹೆಚ್ಚಾಗಿದ್ದರೆ ಅಥವಾ ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದರೆ, ನಮ್ಮ ವೈದ್ಯರನ್ನು ಸಂಪರ್ಕಿಸಿ ಅವರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಯಾರಿಗಾದರೂ ಅಗತ್ಯವಿದ್ದರೆ ಅವರಿಗೆ ಪರೀಕ್ಷೆ ಮಾಡಿಸಲು ಸಲಹೆ ನೀಡಲಾಗುವುದು. ಈ ಕಾರ್ಯಕ್ರಮದ ಮೂಲಕ ಜನರೊಂದಿಗೆ ಸಂಪರ್ಕ ಹೊಂದಲು ಇದು ವೇದಿಕೆಯಾಗಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಕಾರ್ಯಕರ್ತರಿಗೆ ಅಗತ್ಯ ಸುರಕ್ಷತಾ ಸಲಕರಣೆ ನೀಡಲಾಗುತ್ತಿದೆ. ಜತೆಗೆ ಅವರಿಗೆ ವಿಮೆಯನ್ನು ಮಾಡಿಸಲಾಗುತ್ತಿದೆ. ಇದೊಂದು ದೊಡ್ಡ ಮಟ್ಟದ ಸೇವೆಯಾಗಿದ್ದು, ನಿಮ್ಮ ಮುಂದಿನ ತಲೆಮಾರುಗಳು ನಿಮ್ಮ ಈ ಸೇವೆಯಿಂದ ಹೆಮ್ಮೆಪಡಲಿದೆ. ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಹೇಗೆ ಹೋರಾಟ ಮಾಡಿದ್ದರೋ ಅದೇ ಮಾದರಿಯಲ್ಲಿ ಆರೋಗ್ಯಕ್ಕಾಗಿ ನಮ್ಮ ಹೋರಾಟ ನಡೆಯಲಿದೆ.

ನೀವು ಜನರ ಬಳಿ ಹೋದಾಗ ಅವರ ಪ್ರೀತಿ, ಕೋಪ ಎಲ್ಲವೂ ಗೊತ್ತಾಗುತ್ತದೆ. ನೀವು ಕಾರ್ಯಕರ್ತರಾಗಿದ್ದು, ಅವರ ಭಾವನೆ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಎಲ್ಲೆಲ್ಲಿ ಪ್ರೀತಿ ಇದೆ, ಎಲ್ಲೆಲ್ಲಿ ಕೋಪವಿದೆ ಎಂದು ತಿಳಿದು ನಾವು ಮುಂದಿನ ದಿನಗಳಲ್ಲಿ ಸರಿ ಮಾಡಿಕೊಳ್ಳೋಣ ಎಂದಿದ್ದಾರೆ.

Advertisement

ಕಾಂಗ್ರೆಸ್ ಕೇವಲ ಅಧಿಕಾರವಲ್ಲ, ಇದೊಂದು ಆಂದೋಲನ, ಹೋರಾಟ. ಜನರ ಮಧ್ಯೆ ಬೆರೆತು, ಅವರ ಭಾವನೆ ಅರಿತು, ಜನರ ಸಂಕಟಕ್ಕೆ ಪರಿಹಾರ ಕಲ್ಪಿಸಿಕೊಡುವ ರಾಷ್ಟ್ರೀಯ ಪಕ್ಷ. ಆ ಪಕ್ಷದ ಸದಸ್ಯರಾಗಿರುವುದೇ ನಿಮ್ಮ ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಶಾಸಕಿ ಸೌಮ್ಯ ರೆಡ್ಡಿ, ಎಚ್.ಎನ್ ರವೀಂದ್ರ, ಕೆಪಿಸಿಸಿ ವೈದ್ಯ ಘಟಕದ ಸಚೇತಕರಾದ ಡಾ.ಮಧುಸೂದನ್, ಡಾ.ರಾಘವೇಂದ್ರ, ಡಾ.ಸಂಗಮೇಶ್ ಕೊಳ್ಳಿಯವರ್, ಡಾ.ಶ್ರೀನಿವಾಸ, ಡಾ.ದೀಪ್ತಿ, ಡಾ.ರಾಜೇಶ್ ಅವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next