ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮವನ್ನು ಲಾಕ್‌ಡೌನ್ ನಿಯಮಾನುಸಾರವೇ ಮಾಡುತ್ತೇವೆ ಎಂದರೂ ರಾಜ್ಯ ಸರಕಾರ ಯಾವ ಕಾರಣಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.
ನಗರದ ಸಕೀìಟ್ ಹೌಸ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.7ರಂದು ಪದಗ್ರಹಣ ನಿಗದಿಯಾಗಿತ್ತು. ಸಾಂಕ್ರಾಮಿಕ ಕಾಯಿಲೆ ನಿಯಂತ್ರಣ ಕಾಯ್ದೆ ಮುಂದಿಟ್ಟುಕೊಂಡು ರಾಜ್ಯ ಸರಕಾರ ಅನುಮತಿ ನೀಡಿಲ್ಲ ಎಂದರು.
ಸದ್ಯ ಸಾಂಸ್ಥಿಕ ಕ್ವಾರಂಟೈನ್ ಇಲ್ಲ. ಲಾಕ್‌ಡೌನ್ ಕೂಡ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಇಷ್ಟೆಲ್ಲ ಅವ್ಯವಸ್ಥೆ ಇರುವಾಗ ಪದಗ್ರಹಣ ಕಾರ್ಯಕ್ರಮ ನಡೆಸಿದರೆ ಮಾತ್ರ ಸಮಸ್ಯೆಯಾಗುತ್ತದೆಯೇ ಎಂದವರು ಪ್ರಶ್ನಿಸಿದರು.
ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು, ಗಡಿಭಾಗ ಕಾಸರಗೋಡಿನ ವಿದ್ಯಾರ್ಥಿಗಳು ಮಂಗಳೂರಿಗೆ ಪರೀಕ್ಷೆಗೆ ಬರುವ ಕುರಿತು ಜಿಲ್ಲಾಡಳಿತ ಗಮನ ಹರಿಸಬೇಕು ಎಂದ ಅವರು ಮಂಗಳೂರಿನ ವಿವಿಧ ಕಡೆ ಇರುವ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟು ವ್ಯಾಪಾರಕ್ಕೆ ಅವಕಾಶ ಕೊಡಲಾಗಿತ್ತು. ಆದರೆ ಈಗ ಯಾವುದೇ ವ್ಯವಸ್ಥೆ ಮಾಡದೇ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿಗಳನ್ನು ಎಬ್ಬಿಸಿದ್ದರಿಂದ ಜನರಿಗೂ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ಎ.ಸಿ. ವಿನಯರಾಜ್, ಮಮತಾಗಟ್ಟಿ, ಮುಹಮ್ಮದ್ ಮೋನು, ಅನಿಲ್ ಕಾವೂರು, ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.