Advertisement
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮೈಸೂರಿನಲ್ಲಿ ಚಾಮುಂಡೇಶ್ವರೀ ದೇವಿ ದರ್ಶನ ಪಡೆದು ಬೆಂಗಳೂರಿಗೆ ವಾಪಸಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗೆ ಪೂಜೆ ಸಲ್ಲಿಸಿದರು. ಅಡುಗೆ ಅನಿಲದ ಬೆಲೆ ಗಗನಕ್ಕೇರಿರುವುದರಿಂದ ಗೃಹಿಣಿಯರ ಗಮನ ಸೆಳೆಯಲು ಹಾಗೂ ಮತದಾನದಂದು ಸಿಲಿಂಡರ್‌ಗೆ ಪೂಜೆ ನೆರವೇರಿಸಿ ಮತ ಹಾಕಬೇಕೆಂದು ಹೇಳುತ್ತಿದ್ದ ಡಿಕೆಶಿ ಅವರೇ ಸ್ವತಃ ಪಕ್ಷದ ಕಚೇರಿಯಲ್ಲಿ ಸಿಲಿಂಡರ್‌ಗೆ ಕುಂಕುಮ, ಅರಿಶಿನವಿಟ್ಟು ಹೂವಿನ ಹಾರ ಹಾಕಿ ಊದುಬತ್ತಿ ಬೆಳಗಿ ಕರ್ಪೂರ ಹಚ್ಚಿ ನಮಸ್ಕರಿಸಿದರು.ಪ್ರಧಾನಿ ಹೇಳಿದ್ದನ್ನು ನಾವು ಮಾಡಬೇಕು. ಅದೇ ರೀತಿ ಕೊರೊನಾ ವೇಳೆ ಜಾಗಟೆ ಹೊಡೆಯಬೇಕು. ದೀಪ ಹಚ್ಚಬೇಕೆಂದು ಹೇಳಿದ್ದರು. ಅದೇ ರೀತಿ ಮಾಡಿದ್ದೇವೆ. 2013ರ ಚುನಾವಣೆಯಲ್ಲಿ ಗ್ಯಾಸ್ ಸಿಲಿಂಡರ್‌ಗೆ ನಮಸ್ಕರಿಸಿ ವೋಟು ಹಾಕುವಂತೆ ಹೇಳಿದ್ದರು. ಅದೇ ರೀತಿ ಈಗ ಎಲ್ಲರೂ ಅವರ ಮಾತಿಗೆ ಗೌರವ ಕೊಡಬೇಕು. ಮತಗಟ್ಟೆ ಸಮೀಪದಲ್ಲಿರುವ ಕಾಂಗ್ರೆಸ್ ಪಕ್ಷದ ಕ್ಯಾಂಪ್ ಕಚೇರಿಯಲ್ಲಿ ಸಿಲಿಂಡರ್ ಇಟ್ಟು ನಮಸ್ಕರಿಸಿ ಮತಯಾಚಿಸಬೇಕೆಂದು ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಜತೆಗೆ ಮತದಾರರು ಸಹ ಸಿಲಿಂಡರ್‌ಗೆ ನಮಸ್ಕರಿಸಿ ಮತ ಚಲಾಯಿಸಬೇಕೆಂದು ಕೋರಿದರು.
ಲಿಂಗಾಯತ ಮಹಾಸಭಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ ಎಂದು ಪತ್ರ ನೀಡಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಪ್ರತಿಯೊಂದು ಸಮಾಜವು ಅವರ ಇಚ್ಛೆಗೆ ಅನುಗುಣವಾಗಿ ನಡೆದುಕೊಳ್ಳುತ್ತದೆ. ಕಳೆದ ಸಲ ಮಠಾಧೀಶರು ಏನು ತೀರ್ಮಾನ ಮಾಡಿದ್ದರು ಎಂಬುದು ನಿಮಗೆ ಗೊತ್ತಿದೆ. ಹೀಗಾಗಿ ಅವರ ಬಯಕೆ. ಬಂಜಾರ ಸಮಾಜವೂ ಅದೇ ರೀತಿ ತೀರ್ಮಾನ ಕೈಗೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಇಚ್ಛೆಯಂತೆ ನಡೆದುಕೊಳ್ಳಬಹುದು ಎಂದು ಉತ್ತರಿಸಿದರು.