ಬೆಂಗಳೂರು: ಸರ್ಕಾರ ಜಾರಿಗೆ ತಂದ ನೂತನ ಗೋಹತ್ಯೆ ಮಸೂದೆಯಿಂದ ಚರ್ಮೋದ್ಯಮ ಹಾಗೂ ರೈತರಿಗೆ ಹೆಚ್ಚಿನ ಪರಿಣಾಮ ಬೀರಲಿದೆ ಹಾಗಾಗಿ ವಯಸ್ಸಾದ ಜಾನುವಾರುಗಳನ್ನು ಸರ್ಕಾರವೇ ರೈತರಿಂದ ಖರೀದಿಸಿ, ಬಿಜೆಪಿ ಮುಖಂಡರ ಮನೆಯಲ್ಲೋ, ಜಮೀನಿನಲ್ಲೋ ಸಾಕಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೂತನ ಗೋಹತ್ಯೆ ನಿಷೇಧ ಮಸೂದೆಯಿಂದ ರೈತರು ಹಾಗೂ ಚರ್ಮೊದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿಳಲಿವೆ ಎಂದಿದ್ದಾರೆ.
ಮಯಸ್ಸಾದ ಹಾಗೂ ರೈತರಿಗೆ ಅನುಕೂಲವಾಗದ ಜಾನುವಾರುಗಳನ್ನು ರಾಜ್ಯ ಸರ್ಕಾರವೇ ಒಂದು ದರ ನಿಗದಿ ಮಾಡಿ ಅವರಿಂದ ಖರೀದಿ ಮಾಡಬೇಕು. ಹಸುಗಳ ಮಾಲೀಕತ್ವವನ್ನು ಸರಕಾರದ ಪ್ರತಿನಿಧಿಗಳೇ ಪಡೆದು, ಮಂತ್ರಿಗಳ ಮನೆಯಲ್ಲೋ, ಜಮೀನಿನಲ್ಲೋ ಸಾಕಲಿ ಎಂದು ಸರಕಾರದ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ:ಅಸ್ಸಾಂ: ಕುಡಿದ ಮತ್ತಿನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಗಲಾಟೆ; ಓರ್ವ ಸಾವು, ಇಬ್ಬರಿಗೆ ಗಾಯ
ಈ ಮಸೂದೆಯಿಂದ ಚರ್ಮೊದ್ಯಮದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಲಿದೆ. ಇಡೀ ಪ್ರಪಂಚದ ಶೇಕಡಾ 11 ರಷ್ಟು ಚರ್ಮೊದ್ಯಮದ ಉತ್ಪಾದನೆ ಭಾರತದಲ್ಲಿದೆ. ಈಗ ಇಡೀ ಉದ್ಯಮ ಮುಚ್ಚಲಿದೆ. ಆ ಉದ್ಯೋಗಿಗಳಿಗೆ ಪರ್ಯಾಯ ಬದುಕಿನ ವ್ಯವಸ್ಥೆ ಕಲ್ಪಿಸಲು ಯಾವ ಯೋಜನೆ ರೂಪಿಸಲಾಗಿದೆ ಎಂದರು.
ಇದು ಒಂದು ಸಮುದಾಯದ ಮೇಲೆ ಬಣ್ಣ ಹಚ್ಚಲು, ಹಾಗೂ ಅವರನ್ನು ಟಾರ್ಗೆಟ್ ಮಾಡಲು ನಡೆದಿರುವ ಹುನ್ನಾರ. ಆದರೆ ಇದು ಒಂದು ಸಮುದಾಯಕ್ಕೆ ಸಂಬಂಧಿಸಿದ ವಿಚಾರವಲ್ಲ. ಈ ರಾಜ್ಯದ ರೈತರು, ಎಲ್ಲ ಸಮಾಜದ ವಿಚಾರ. ಅವರ ರಕ್ಷಣೆಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಪಕ್ಷ ಚಿಂತನೆ ನಡೆಸಿದೆ. ಗ್ರಾಮ ಪಂಚಾಯ್ತಿ ಚುನಾವಣೆ ನಂತರ ರಾಜ್ಯದ ಉದ್ದಗಲಕ್ಕೂ ಪ್ರತಿ ತಾಲೂಕು ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮ ಮಾಡುತ್ತೇವೆ ಅಲ್ಲದೆ ನಾವು ಅಧಿಕಾರಕ್ಕೆ ಬಂದರೆ, ಈ ಸರ್ಕಾರ ಜಾರಿಗೆ ತಂದಿರುವ ಎಲ್ಲ ಜನ ವಿರೋಧಿ ಕಾಯ್ದೆಗಳನ್ನು ಮುಲಾಜಿಲ್ಲದೆ ವಜಾಗೊಳಿಸುತ್ತೇವೆ ಎಂದು ಹೇಳಿದ್ದಾರೆ.