ಬೆಂಗಳೂರು: ‘ತಾವು ಹಿಂದೆ ಚಲಾಯಿಸಿದ ಮತಗಳನ್ನು ಗೆದ್ದ ಅಭ್ಯರ್ಥಿ ಮಾರಾಟ ಮಾಡಿಕೊಂಡಿದ್ದಕ್ಕೆ ರಾಜರಾಜೇಶ್ವರಿ ಕ್ಷೇತ್ರದ ಮತದಾರರು ಆಕ್ರೋಶಗೊಂಡಿದ್ದು, ಮುಂದಿನ ತಿಂಗಳು 3ನೇ ತಾರೀಖಿನಂದು ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತಿದೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ನಾವು ಕೊಟ್ಟ ಮತವನ್ನು ಮಾರಿಕೊಳ್ಳಲಾಗಿದೆ ಎಂದು ಜನರು ಆಕ್ರೋಶಗೊಂಡಿದ್ದಾರೆ’ ಎಂದರು.
ನಿಮ್ಮ ಕೈಯಲ್ಲಿ ಆಗಿಲ್ಲ ಅಂದ್ರೆ ಅಧಿಕಾರ ಬಿಡಿ:
ಪ್ರವಾಹ ಪೀಡಿತ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಭೇಟಿ ನೀಡಲು ತಮಗೆ ವಯಸ್ಸಾಗಿದೆ, ಕೋವಿಡ್ ಇದೆ ಎಂದು ಸಚಿವ ಗೋವಿಂದ ಕಾರಜೋಳ ಅವರು ಕಣ್ಣೀರು ಹಾಕಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, ‘ಜನರ ಸಮಸ್ಯೆಗೆ ಸ್ಪಂದಿಸಲು ಆಗದಿದ್ದರೆ, ಸಚಿವ ಸ್ಥಾನ ಬಿಡಬೇಕು. ಅಧಿಕಾರ ಬಿಟ್ಟು ಮನೆ ಸೇರಿಕೊಂಡರೆ ಉತ್ತಮ. ನಿಮ್ಮ ಸ್ವಂತ ಹಿತಕ್ಕಾಗಿ ರಾಜ್ಯ ಹಾಗೂ ರಾಜ್ಯದ ಜನರನ್ನು ಬಲಿ ಕೊಡಲು ಸಾಧ್ಯವಿಲ್ಲ. ನಮ್ಮ ಪಕ್ಷದ ಸ್ಥಳೀಯ ನಾಯಕರಿಗೆ ಈಗಾಗಲೇ ತಮ್ಮ ಕೈಲಾದ ಸಹಾಯ ಮಾಡಿ ಅಂತಾ ಸೂಚನೆ ನೀಡಿದ್ದೇವೆ. ಅವರಿಗೆ ಧೈರ್ಯ ತುಂಬಲು ಹೇಳಿದ್ದೇವೆ. ಮಿಕ್ಕ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ’ ಎಂದು ತಿಳಿಸಿದರು.
ಇದನ್ನೂ ಓದಿ:ಡ್ರಗ್ಸ್ ಪ್ರಕರಣದಲ್ಲಿ ಯಾರೇ ಇದ್ದರೂ ಶಿಕ್ಷೆಯಾಗಬೇಕು : ಪವರ್ ಸ್ಟಾರ್ ಪುನೀತ್ ರಾಜಕುಮಾರ್
‘ಪ್ರಧಾನ ಮಂತ್ರಿಗಳು ಸಹಾಯ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅವರು ಇಲ್ಲಿಗೆ ಬರಲೂ ಇಲ್ಲ. ಯಾವ ಸಹಾಯವನ್ನು ಮಾಡಲೂ ಇಲ್ಲ. ಈ ಸರ್ಕಾರದಲ್ಲಿ ಜೀವಕ್ಕೆ ರಕ್ಷಣೆ ಇಲ್ಲದಾಗಿದೆ.
ಮಾಧ್ಯಮಗಳು ಜನರು ಹಾಗೂ ಸರ್ಕಾರದ ನಡುವಣ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ. ಯಾವ ಸಚಿವರು ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಧ್ಯಮಗಳೇ ಜನರಿಗೆ ಮಾಹಿತಿ ನೀಡಬೇಕು’ ಎಂದರು.