Advertisement

ದ.ಕ. ಕೋಮು ಗಲಭೆ, ಹತ್ಯೆ ಪ್ರಕರಣ ವರದಿ ಕೊಡಿ: ಕೇಂದ್ರ ತಾಕೀತು

06:00 AM Jul 26, 2017 | Team Udayavani |

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ  ಸಹಿತ ರಾಜ್ಯದಲ್ಲಿ ನಡೆದ ಕೋಮುಗಲಭೆ ಹಾಗೂ 24 ಜನರ “ರಾಜಕೀಯ’ ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ಕೇಂದ್ರ ಪತ್ರ ಬರೆದಿದೆ.

Advertisement

ರಾಜ್ಯದಲ್ಲಿ ಈಚೆಗೆ ಅತಿ ಹೆಚ್ಚು ರಾಜಕೀಯ ಹತ್ಯೆಗಳು ನಡೆಯುತ್ತಿವೆ ಎಂಬ ವಿಪಕ್ಷ ಬಿಜೆಪಿ ಆರೋಪಕ್ಕೆ ಮನ್ನಣೆ ನೀಡಿರುವ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮಾಹಿತಿ ನೀಡುವಂತೆ ಸೂಚಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಂಗಳೂರಿನ ಶರತ್‌, ಬೆಂಗಳೂರಿನ ರುದ್ರೇಶ್‌ ಸಹಿತ ರಾಜ್ಯದಲ್ಲಿ 24 ಜನರು ರಾಜಕೀಯ ಕಾರಣಗಳಿಗಾಗಿ ಹತ್ಯೆ
ಯಾಗಿದ್ದಾರೆ ಎಂಬ ಗುಮಾನಿ ಇದ್ದು, ಈ ಬಗೆಗಿನ ತನಿಖೆ,ಆರೋಪಿಗಳ ಬಂಧನ ಮತ್ತು ಅವರಿಗೆ ವಿಧಿಸಲಾದ ಶಿಕ್ಷೆ ಕುರಿತು ಸಂಪೂರ್ಣ ವಿವರ ನೀಡುವಂತೆ ಈ ಪತ್ರದಲ್ಲಿ ನಿರ್ದೇಶಿಸಲಾಗಿದೆ. ಗಲಭೆ ಮತ್ತು ಹತ್ಯೆಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರಕಾರ ತೆಗೆದು ಕೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಬೇಕೆಂದು ಪತ್ರದಲ್ಲಿ ತಿಳಿಸಿದೆ.

ಕಳೆದ ವಾರವಷ್ಟೇ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು, ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪತ್ರ ಬರೆದು “”ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಸಂಘ ಪರಿವಾರದ ಮತ್ತು ಬಿಜೆಪಿಯ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡಿ ಹತ್ಯೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು ಇದುವರೆಗೂ 24 ಅಮಾಯಕರ ಕೊಲೆಗಳಾಗಿವೆ. ಇದು ರಾಜಕೀಯ ಪ್ರೇರಿತ ಹತ್ಯೆಯಾಗಿದ್ದು, ಎನ್‌ಐಎ ತನಿಖೆಗೆ ವಹಿಸಬೇಕು” ಎಂದು ಆಗ್ರಹಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಎನ್‌.ಎಸ್‌.ಬಿಸ್ತ ಅವರು, ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಯಾ ಅವರಿಗೆ ಪತ್ರ ಬರೆದು ವಿವರ ನೀಡುವಂತೆ ಕೋರಿದ್ದಾರೆ.

ಜತೆಗೆ ಸಂಸದೆ  ಶೋಭಾ ಅವರ ಪತ್ರವನ್ನೂ ಅಡಕ ಮಾಡಲಾಗಿದೆ.  ಕೇಂದ್ರದ ಪತ್ರವನ್ನು ಮುಖ್ಯ ಕಾರ್ಯದರ್ಶಿಗಳು ಗೃಹ ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ.

Advertisement

ಮಂಗಳೂರಿನಲ್ಲಿ ನಡೆದ ಕೋಮು ಗಲಭೆ ಮತ್ತು ಶರತ್‌ ಮಡಿವಾಳ್‌ ಹತ್ಯೆ ಕುರಿತಂತೆ ಮಾಹಿತಿ ಪಡೆದು ಕೇಂದ್ರಕ್ಕೆ ಉತ್ತರಿಸಲು ಗೃಹ ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿಯಿಂದ ಶೀಘ್ರವೇ ಅಗತ್ಯ ಮಾಹಿತಿ ಪಡೆದುಕೊಂಡು ಕೇಂದ್ರ ಸರಕಾರಕ್ಕೆ ವರದಿ ನೀಡಲಾಗುವುದು ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next