Advertisement

ಡಿ.ಕೆ.ರವಿ ಸಾವಿನ ಪ್ರಕರಣ: ಶೆಟ್ಟರ್‌-ಜಾರ್ಜ್‌ ಚಕಮಕಿ

03:45 AM Jun 16, 2017 | Team Udayavani |

ವಿಧಾನಸಭೆ: ಐಎಎಸ್‌ ಅಧಿಕಾರಿ ಡಿ.ಕೆ.ರವಿ ಮೃತಪಟ್ಟ ಪ್ರಕರಣ ಗುರುವಾರ ಸಚಿವ ಕೆ.ಜೆ.ಜಾರ್ಜ್‌ ಮತ್ತು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ನಡುವೆ ವಾಗ್ವಾದಕ್ಕೆ ಕಾರಣವಾಯಿತಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲದ ಪರಿಸ್ಥಿತಿ ಉಂಟಾಯಿತು.

Advertisement

ಇಲಾಖಾ ಅನುದಾನಗಳ ಬೇಡಿಕೆ ಮೇಲೆ ಚರ್ಚೆ ನಡೆಯುತ್ತಿದ್ದಾಗ ಪೊಲೀಸ್‌ ಇಲಾಖೆ ಕಾರ್ಯವೈಖರಿ ಬಗ್ಗೆ ಪ್ರಸ್ತಾಪವಾಯಿತು. ಪೊಲೀಸರು ವಿವೇಚನಾರಹಿತವಾಗಿ ಅಧಿಕಾರ ಬಳಸಿದರೆ ಏನಾಗುತ್ತದೆ ಎಂದು ವಿವರಿಸುತ್ತಿದ್ದ
ರಮೇಶ್‌ಕುಮಾರ್‌, ವಿನಾ ಕಾರಣ ಆರೋಪಗಳು ಮೈಮೇಲೆ ಬರುವ ಬಗ್ಗೆಯೂ ಹೇಳಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಕೆ.ಜೆ.ಜಾರ್ಜ್‌, ಐಎಎಸ್‌ ಅಧಿಕಾರಿ ಡಿ.ಕೆ.ರವಿ ಮೃತಪಟ್ಟಾಗ ನನ್ನ ಮೇಲೆ ಆರೋಪ
ಮಾಡಲಾಯಿತು. ನಾನೇ ಅವರ ಹತ್ಯೆಯ ಹಿಂದಿದ್ದೇನೆ ಎನ್ನುವ ರೀತಿಯಲ್ಲಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಮಾತನಾಡಿದರು. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು.

ಸಿಬಿಐ ತನಿಖೆ ನಡೆಯುತ್ತಿದ್ದಾಗ ಹಿಂದೆ ನನ್ನ ಮೇಲೆ ಆರೋಪ ಮಾಡಿದವರಾರೂ ಅವರಿಗೆ ದಾಖಲೆಗಳನ್ನು ಒದಗಿಸಲಿಲ್ಲ. ಕೊನೆಗೆ ಸಿಬಿಐ ತನಿಖೆ ಮುಗಿದು ವರದಿ ಬಂದಾಗ ಸಾವಿನ ಹಿಂದಿನ ಕಾರಣಗಳು ಗೊತ್ತಾಯಿತು. ನನ್ನ
ಪಾತ್ರವೇನೂ ಇಲ್ಲ ಎಂಬುದೂ ಸ್ಪಷ್ಟವಾಯಿತು. ಆದರೆ, ಯಾರೊಬ್ಬರೂ ಸಿಬಿಐ ವರದಿ ಓದಲಿಲ್ಲ ಮತ್ತು ನನ್ನ ಮೇಲೆ ಮಾಡಿದ ವೃಥಾರೋಪಕ್ಕೆ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ ಎಂದರು.

ಕಾಂಗ್ರೆಸ್‌-ಬಿಜೆಪಿ ಗದ್ದಲ: ಅಷ್ಟರಲ್ಲಿ ಕಾಂಗ್ರೆಸ್‌ನ ಕೆ.ಎನ್‌.ರಾಜಣ್ಣ ಎದ್ದುನಿಂತು, ಅದಕ್ಕೇ ನೀವು ಕೆ.ಜೆ. ಜಾರ್ಜ್‌, ಅವರು (ಆರೋಪ ಮಾಡಿದವರು) ಜಗದೀಶ್‌ ಶೆಟ್ಟರ್‌ ಎಂದಾಗ ಆಕ್ರೋಶಗೊಂಡ ಜಗದೀಶ್‌ ಶೆಟ್ಟರ್‌, ಆ ಸಂದರ್ಭದಲ್ಲಿ ನಮಗೆ
ಬಂದ ಮಾಹಿತಿ ಆಧರಿಸಿ ಸದನದಲ್ಲಿ ಪ್ರಸ್ತಾಪಿಸಿದೆ ಎಂದಾಗ ಜಾರ್ಜ್‌ ಎದ್ದುನಿಂತು ಶೆಟ್ಟರ್‌ ವಿರುದ್ಧ ಕಿಡಿ ಕಾರಿದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್‌ ಸದಸ್ಯರು ಜಾರ್ಜ್‌ ಬೆನ್ನಿಗೆ ನಿಂತರೆ, ಬಿಜೆಪಿ
ಸದಸ್ಯರು ಜಗದೀಶ್‌ ಶೆಟ್ಟರ್‌ ಪರ ಎದ್ದುನಿಂತು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದರು.

ಯಾರು, ಏನು ಹೇಳುತ್ತಿದ್ದಾರೆ ಎಂಬುದೇ ಅರ್ಥವಾಗಲಿಲ್ಲ.

Advertisement

ಆರೋಪ ಬಂದಾಗ ಕ್ಲೀನ್‌ಚಿಟ್‌:
ಗದ್ದಲ ಕೈಮೀರುತ್ತಿರುವುದನ್ನು ಗಮನಿಸಿದ ಸ್ಪೀಕರ್‌ ಕೆ.ಬಿ.ಕೋಳಿವಾಡ ಎಲ್ಲಾ ಸದಸ್ಯರನ್ನೂ ಸಮಾಧಾನಪಡಿಸಿದರು. ಆದರೂ ಜಾರ್ಜ್‌ ಮತ್ತು ಶೆಟ್ಟರ್‌ ನಡುವಿನ ಜಗಳ ತಣ್ಣಗಾಗಲಿಲ್ಲ. ಜಾರ್ಜ್‌ ಅವರು ಶೆಟ್ಟರ್‌ ವಿರುದ್ಧ ಟೀಕೆ
ಮುಂದುವರಿಸಿದರೆ, ಡಿವೈಎಸ್ಪಿ ಗಣಪತಿ ಹತ್ಯೆ ಪ್ರಕರಣದಲ್ಲಿ ನಿಮ್ಮ ವಿರುದ್ಧ ನ್ಯಾಯಾಂಗ ತನಿಖೆ ನಡೆಯುತ್ತಿದ್ದರೂ ಸಿಐಡಿ ಮೂಲಕ ಕ್ಲೀನ್‌ಚಿಟ್‌ ಪಡೆದುಕೊಂಡಿರಿ. ಆಡಳಿತ ಪಕ್ಷದ ಯಾರ ಮೇಲಾದರೂ ಆರೋಪ ಬಂದಾಗ ಸಿಐಡಿ ತನಿಖೆ ನಡೆಸಿ ಕ್ಲೀನ್‌ ಚಿಟ್‌ ಕೊಡಿಸುತ್ತಿದ್ದೀರಿ ಎಂದು ಶೆಟ್ಟರ್‌ ಮತ್ತೆ ಕೆಣಕಿದರು.

ತಾವು ಎದ್ದುನಿಂತು ಆದೇಶಿಸಿದರೂ ಪರಿಸ್ಥಿತಿ ತಹಬದಿಗೆ ಬಾರದ ಕಾರಣ ಅಸಮಾಧಾನಗೊಂಡ ಸ್ಪೀಕರ್‌, ಇಲಾಖಾ ಅನುದಾನಗಳ ಬೇಡಿಕೆ ಮೇಲೆ ಸದಸ್ಯ ರಾಜೀವ್‌ ಮಾತನಾಡುವುದನ್ನು ಹೊರತುಪಡಿಸಿ ಬೇರೆ ಯಾವುದೇ ಮಾತು ಕಡತಕ್ಕೆ ಹೋಗಬಾರದು ಎಂದು ಸೂಚನೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next