Advertisement

ದ.ಕ: ಬೇಡಿಕೆ-ಲಭ್ಯತೆಯ ಜತೆಗೆ ಆಮ್ಲಜನಕ ನಿತ್ಯ ದಾಸ್ತಾನು

08:45 PM May 27, 2021 | Team Udayavani |

ಮಹಾನಗರ: ಚಾಮರಾಜ ನಗರದಲ್ಲಿ ರಾತೋರಾತ್ರಿ ಆಕ್ಸಿಜನ್‌ ಲಭಿಸದೆ ಕೋವಿಡ್ ರೋಗಿಗಳು ಮೃತಪಟ್ಟ ದುರಂತ ಘಟನೆ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ದ.ಕ. ಜಿಲ್ಲೆಯಲ್ಲಿ ಆಕ್ಸಿಜನ್‌ ಬೇಡಿಕೆ- ಲಭ್ಯತೆಯ ಹೊರತಾಗಿಯೂ ಪ್ರತೀದಿನ 500 ಜಂಬೋ ಸಿಲಿಂಡರ್‌ ದಾಸ್ತಾನು ಮಾಡಲಾಗುತ್ತಿದೆ.

Advertisement

ಜಿಲ್ಲೆಗಳಲ್ಲಿ ಆಮ್ಲಜನಕ ಬಫರ್‌ ಸ್ಟಾಕ್‌ ಸಂಗ್ರಹ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಅವರು ಅಧಿಕಾರಿಗಳಿಗೆ ಬುಧವಾರ ಸೂಚಿಸಿದ್ದಾರೆ. ಆದರೆ ದ.ಕ. ಜಿಲ್ಲೆಯಲ್ಲಿ ಈ ಕ್ರಮವನ್ನು ಒಂದು ವಾರದಿಂದಲೇ ಅನುಷ್ಠಾನಕ್ಕೆ ತರಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಯಲ್ಲಿ ಪ್ರತೀದಿನ 25 ಟನ್‌ ಆಕ್ಸಿಜನ್‌ ಬೇಡಿಕೆ ಯಿದೆ. ಅಷ್ಟೇ ಪ್ರಮಾಣದಲ್ಲಿ ಆಕ್ಸಿಜನ್‌ ಬಳ್ಳಾರಿಯಿಂದ ಸದ್ಯ ಲಭ್ಯವಾಗುತ್ತಿದೆ. ಒಂದೆರಡು ದಿನದ ಅಂತರದಲ್ಲಿ ಈ ಸರಬರಾಜು ಪ್ರಕ್ರಿಯೆ ನಡೆಯುತ್ತಿದೆ. ಇಷ್ಟಿದ್ದರೂ ಕೆಲವೊಮ್ಮೆ ಆಸ್ಪತ್ರೆಗಳಿಗೆ ತುರ್ತಾಗಿ ಆಕ್ಸಿಜನ್‌ ಅಗತ್ಯವಿದ್ದರೆ ಸರಬರಾಜು ಮಾಡಲು ಕಷ್ಟವಾಗುತ್ತದೆ. ಹೀಗಾಗಿ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಸೂಚನೆ ಮೇರೆಗೆ 500 ಜಂಬೋ ಸಿಲಿಂಡರ್‌ಗಳನ್ನು ಬಫರ್‌ ಸ್ಟಾಕ್‌ ಮಾದರಿಯಲ್ಲಿ ಸಂಗ್ರಹಿಸಿಡಲಾಗುತ್ತಿದೆ.

ಬೈಕಂಪಾಡಿಯಲ್ಲಿ ಬಫರ್‌ ಸ್ಟಾಕ್‌ :

1 ಜಂಬೋ ಸಿಲಿಂಡರ್‌ನಲ್ಲಿ 7 ಸಾವಿರ ಲೀ. ಆಕ್ಸಿಜನ್‌ ಇರುತ್ತದೆ. ಹೀಗಾಗಿ 500 ಜಂಬೋ ಸಿಲಿಂಡರ್‌ ದ.ಕ. ಜಿಲ್ಲೆಗೆ ಸಾಮಾನ್ಯವಾಗಿ 2 ದಿನಕ್ಕೆ ಸಾಕಾಗಬಹುದು. ಬಫರ್‌ ಸ್ಟಾಕ್‌ ಅನ್ನು ಬೈಕಂಪಾಡಿಯ ಆಕ್ಸಿಜನ್‌ ರೀಫಿಲ್ಲಿಂಗ್‌ ಕೇಂದ್ರದಲ್ಲಿ ಸಂಗ್ರಹಿಸಿಡಲಾಗುತ್ತದೆ. ಜಿಲ್ಲೆಯ ಯಾವುದೇ ಭಾಗಕ್ಕೆ ತುರ್ತಾಗಿ ಆಕ್ಸಿಜನ್‌ ಅಗತ್ಯವಿದ್ದರೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಬಫರ್‌ ಸ್ಟಾಕ್‌ ಅನ್ನು ಸರಬರಾಜು ಮಾಡಲಾಗುತ್ತದೆ. ಇದಕ್ಕಾಗಿ ಬೈಕಂಪಾಡಿಯಲ್ಲಿ ವಾಹನ ವ್ಯವಸ್ಥೆಯನ್ನೂ ಸಜ್ಜುಗೊಳಿಸಲಾಗಿದೆ.

Advertisement

ವೆನ್ಲಾಕ್‌ನಲ್ಲಿ 3 ಆಕ್ಸಿಜನ್‌ ಸಂಗ್ರಹಣ ಸ್ಥಾವರ :

ವೆನ್ಲಾಕ್‌ ಜಿಲ್ಲಾಸ್ಪತ್ರೆಯಲ್ಲಿ ಇಲ್ಲಿಯವರೆಗೆ 6,000 ಕೆ.ಎಲ್‌. ಸಾಮರ್ಥ್ಯದ ಒಂದು ಆಕ್ಸಿಜನ್‌ ಸಂಗ್ರಹಣ ಟ್ಯಾಂಕ್‌ ಕಾರ್ಯಾಚರಿಸುತ್ತಿತ್ತು. ಇದೀಗ ಇಲ್ಲಿ 6,000 ಕೆ.ಎಲ್‌. ಸಾಮರ್ಥ್ಯದ ಮತ್ತೂಂದು ಆಕ್ಸಿಜನ್‌ ಸಂಗ್ರಹಣ ಸ್ಥಾವರವನ್ನು ಸ್ಥಾಪಿಸಲಾಗಿದ್ದು, ಕಾರ್ಯಾ ರಂಭಿಸಿದೆ. ಹೀಗಾಗಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಮಸ್ಯೆಗೆ ಕೊಂಚ ಪರಿ ಹಾರ ದೊರೆತಂತಾಗಿದೆ. ಜತೆಗೆ ವೆನ್ಲಾಕ್‌ನಲ್ಲಿ ಎಂಆರ್‌ಪಿಎಲ್‌ ವತಿಯಿಂದ ಪ್ರತೀ ದಿನ 7,000 ಲೀ. ಸಾಮರ್ಥ್ಯದ ಮತ್ತೂಂದು ಟ್ಯಾಂಕ್‌ ನಿರ್ಮಿಸುವ ಕಾರ್ಯವೂ ಪ್ರಗತಿಯಲ್ಲಿದೆ.

ಜಿಲ್ಲೆಗೆ ಹೆಚ್ಚುವರಿ ಆಕ್ಸಿಜನ್‌ ಘಟಕ :

ಕೋವಿಡ್ ಕಾರಣದಿಂದ ದ.ಕ. ಜಿಲ್ಲೆಯಲ್ಲಿ ಆಕ್ಸಿಜನ್‌ ಲಭ್ಯತೆಯ ಸವಾಲು ಎದುರಾದ ಕಾರಣದಿಂದ ವಿವಿಧ ಕಂಪೆನಿಗಳ ನೆರವಿನಿಂದ ಪ್ರತೀದಿನ ಹೆಚ್ಚುವರಿಯಾಗಿ 8,670 ಲೀ. ಆಕ್ಸಿಜನ್‌ ಉತ್ಪಾದನೆಗೆ ಉದ್ದೇಶಿಸಲಾಗಿದೆ. ಈ ಪೈಕಿ ಬಹುತೇಕ ಎಲ್ಲ ಯೋಜನೆಯ ಕಾಮಗಾರಿ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ಣವಾಗಲಿದೆ.

ವೆನ್ಲಾಕ್‌ ಆಸ್ಪತ್ರೆಯಲ್ಲಿ ಎಂಆರ್‌ಪಿಎಲ್‌ ವತಿಯಿಂದ ಪ್ರತೀದಿನ 7 ಸಾವಿರ ಲೀ. ಸಾಮರ್ಥ್ಯದ (192 ಜಂಬೋ ಸಿಲಿಂಡರ್‌) ಆಕ್ಸಿಜನ್‌ ಘಟಕ, ಎಂಸಿಎಫ್‌ ವತಿಯಿಂದ ತಲಾ 80 ಲೀಟರ್‌ ಸಾಮರ್ಥ್ಯದ (ತಲಾ 17 ಜಂಬೋ ಸಿಲಿಂಡರ್‌) ಘಟಕ, ಗೈಲ್‌ ಸಂಸ್ಥೆಯ ವತಿಯಿಂದ 560 ಲೀ. ಸಾಮರ್ಥ್ಯ (51 ಜಂಬೋ ಸಿಲಿಂಡರ್‌), ಕೆಐಒಸಿಎಲ್‌ ವತಿಯಿಂದ 560 ಲೀಟರ್‌ ಸಾಮರ್ಥ್ಯದ (51 ಜಂಬೋ ಸಿಲಿಂಡರ್‌) ಘಟಕ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಕೆಲವೇ ದಿನದಲ್ಲಿ ಉತ್ಪಾದನೆಯನ್ನೂ ಆರಂಭಿಸಲಿದೆ. ಇದರ ಜತೆಗೆ ಸುಳ್ಯದಲ್ಲಿ ಸರಕಾರದ ವತಿಯಿಂದ 85 ಲಕ್ಷ ರೂ. ವೆಚ್ಚದಲ್ಲಿ 85 ಜಂಬೋ ಸಿಲಿಂಡರ್‌ ಸಾಮರ್ಥ್ಯದ ಘಟಕ ನಿರ್ಮಾಣವಾಗಲಿದೆ.

ಆಯಾ ಜಿಲ್ಲೆಗಳಲ್ಲಿ ಇರುವ ಸಕ್ರಿಯ ಪ್ರಕರಣಗಳ ಆಧಾರದ ಮೇಲೆ ಆಮ್ಲಜನಕವನ್ನು ಹಂಚಿಕೆ ಮಾಡಲಾಗುತ್ತಿದೆ. ಪ್ರತಿದಿನ ಆಯಾ ಆಸ್ಪತ್ರೆಗಳಿಗೆ ನಿಗದಿಪಡಿಸಲಾದ ಪ್ರಮಾಣದಲ್ಲಿ ಆಮ್ಲಜನಕ ರವಾನೆ ಆಗುತ್ತಿದೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಲ್ಲಿ ಬಫರ್‌ ಸ್ಟಾಕ್‌ ಆಗಿ ಆಮ್ಲಜನಕ ದಾಸ್ತಾನು ಮಾಡಲಾಗುತ್ತಿದೆ. ಡಾ| ಕಿಶೋರ್‌ ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ-ದ.ಕ.

 

Advertisement

Udayavani is now on Telegram. Click here to join our channel and stay updated with the latest news.

Next