Advertisement

ದ.ಕ.-ಕೊಡಗು ಸಂಪರ್ಕ: ಹತ್ತಿರದ ಹಾದಿಗೆ ಅರಣ್ಯ ಇಲಾಖೆ ಬೀಗ!

10:31 AM Mar 28, 2018 | Team Udayavani |

ಬೆಳ್ಳಾರೆ: ದ.ಕ. ಮತ್ತು ಕೊಡಗು ಜಿಲ್ಲೆ ಸಂಪರ್ಕದ ಅತೀ ಹತ್ತಿರ ಹಾದಿಯಾದ ತೊಡಿಕಾನ-ಪಟ್ಟಿ- ಭಾಗಮಂಡಲ ರಸ್ತೆಗೆ ಅರಣ್ಯ ಇಲಾಖೆ ಬೀಗ ಜಡಿದಿದ್ದು, ಭಕ್ತರು ಸಮಸ್ಯೆಗೊಳಗಾಗಿದ್ದಾರೆ. ಕೆಲವು ಭಕ್ತರು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ, ಬಳಿಕ ಭಾಗಮಂಡಲ – ತಲಕಾವೇರಿಗೆ ಈ ರಸ್ತೆಯ ಮೂಲಕ ತೆರಳುತ್ತಾರೆ. ಇದೀಗ ಅರಣ್ಯ ಇಲಾಖೆಯವರು ರಸ್ತಗೆ ಅಡ್ಡವಾಗಿ ಸಂಕೋಲೆ ಕಟ್ಟಿ ಬೀಗ ಜಡಿದ ಪರಿಣಾಮ ಅರಣ್ಯ ಇಲಾಖೆಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

Advertisement

ತೊಡಿಕಾನದಿಂದ ಕೇವಲ 17 ಕಿ.ಮೀ. ಅಂತರದಲ್ಲಿ ಕೊಡಗಿನ ಭಾಗಮಂಡಲವನ್ನು ತೊಡಿಕಾನ – ಪಟ್ಟಿ ರಸ್ತೆಯ ಮೂಲಕ ಕ್ರಮಿಸಬಹುದಾಗಿದೆ. ಭಾಗಮಂಡಲದಿಂದ 10 ಕಿ.ಮೀ. ಪ್ರಯಾಣಿಸಿದರೆ ಕೊಡಗಿನ ಪ್ರಸಿದ್ಧ ತೀರ್ಥ ಕ್ಷೇತ್ರವಾದ ತಲಕಾವೇರಿಯನ್ನು ತಲುಪಬಹುದು.

ಐತಿಹಾಸಿಕ ಸಂಬಂಧ
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೂ ಕೊಡಗಿನ ತಲಕಾವೇರಿಗೂ ಐತಿಹಾಸಿಕ ನೇರ ಸಂಬಂಧಗಳಿವೆ.
ತಲಕಾವೇರಿ ತೀರ್ಥ ಉದ್ಭವ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ತೊಡಿಕಾನ ದೇವಸ್ಥಾನಕ್ಕೆ ಮೊದಲು ತೆಗೆದಿಡುತ್ತಾರೆ. ದೇಗುಲದಿಂದ ಅರ್ಚಕರು ತಲಕಾವೇರಿಗೆ ಕಾಲ್ನಡಿಗೆಯಲ್ಲಿ ತೆರಳಿ, ತೀರ್ಥ ತಂದು, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರಿಗೆ ಅಭಿಷೇಕ ಮಾಡುತ್ತಿದ್ದರು. ಈಗ ವಾಹನದಲ್ಲಿ ತೆರಳಿ ತೀರ್ಥ ತರುತ್ತಾರೆ. ಕಾವೇರಿ ತೀರ್ಥ ಉದ್ಭವ ಸಂದರ್ಭ ಕುಂದಾಪುರ ಮುಂತಾದ ಕಡೆಗಳಿಂದ ಭಕ್ತರು ಕಾವೇರಿ ಜಾತ್ರೆಗೆ ಕಾಲ್ನಡಿಗೆಯಲ್ಲಿ
ಯಾತ್ರೆ ಮಾಡುತ್ತಿದ್ದರು. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರಾತ್ರಿ ಕಳೆದು, ದೇವರ ದರ್ಶನ ಹಾಗೂ
ವಿಶ್ರಾಂತಿ ಪಡೆದು, ತೊಡಿಕಾನ- ಪಟ್ಟಿ – ಭಾಗಮಂಡಲ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ತಲಕಾವೇರಿಯನ್ನು ತಲುಪುತ್ತಿದ್ದರು. ಕಾವೇರಿ ಜಾತ್ರೆಯ ಮುನ್ನಾ ದಿನ ತೊಡಿಕಾನ ದೇವಸ್ಥಾನಲ್ಲಿ ಕೊಪ್ಪರಿಗೆ ಏರಿಸುವ ಸಂಪ್ರದಾಯವಿದೆ.

ಹಿಂದೆಯೂ ಅಡ್ಡಿಪಡಿಸಿತ್ತು
ಸುಮಾರು 15 ವರ್ಷಗಳ ಹಿಂದೆ ಅರಣ್ಯ ಇಲಾಖೆ ಇಲ್ಲಿಯೇ ಬೀಗ ಜಡಿದು ಜನರ ಸಂಚಾರಕ್ಕೆ ಅಡ್ಡಿಪಡಿಸಿತ್ತು.ಆಗ ಕೊಡಗಿನ ಶಾಸಕರಾಗಿದ್ದ ಅಪ್ಪಚ್ಚು ರಂಜನ್‌, ಈಗಿನ ವಿರಾಜಪೇಟೆ ಶಾಸಕ ಬೋಪಯ್ಯ, ಸುಳ್ಯ ಶಾಸಕ ಅಂಗಾರ ಅವರ ನೇತೃತ್ವದಲ್ಲಿ ಕೊಡಗಿನ ಕರಿಕೆ, ತೊಡಿಕಾನ ಭಾಗದ 2000 ಮಂದಿ ಅರಣ್ಯ ಇಲಾಖೆಯ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿದ್ದರು. ಬಳಿಕ ಅರಣ್ಯ ಇಲಾಖೆ ಗೇಟನ್ನು ತೆರವುಗೊಳಿಸಿತ್ತು. ಈಗ ಮತ್ತೆ ಬೀಗ ಹಾಕಿದ್ದರಂದ ತೊಡಿಕಾನ ಜನರು ಪ್ರತಿಭಟನೆಯ ಸೂಚನೆ ನೀಡಿದ್ದಾರೆ.

ಬ್ರಿಟಿಷ್‌ ಸರಕಾರದಲ್ಲಿ ದಾಖಲೆ
ತೊಡಿಕಾನ-ಪಟ್ಟಿ ರಸ್ತೆಯ ಬಗ್ಗೆ ಬ್ರಿಟಿಷ್‌ ಸರಕಾರದ ಅವಧಿಯಲ್ಲೇ ದಾಖಲೆ ಇದ್ದು, ಇದನ್ನು ಕಾವೇರಿ ಸಾರೋಟು ರಸ್ತೆ ಎಂದು ಕರೆಯಲಾಗಿದೆ. 1890ರಲ್ಲಿ ಅರಣ್ಯ ಇಲಾಖೆಯೇ ಈ ರಸ್ತೆಯನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಬಹುದೆಂದು
ಹೇಳಿದೆ. ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನು ತಾನೇ ಉಸ್ತುವಾರಿ ನೋಡಿಕೊಳ್ಳುವುದೆಂದು ಹೇಳಿಕೊಂಡಿದೆ. ಈ ರಸ್ತೆ ಕೊಡಗಿನ ಕರಿಕೆ ಹಾಗೂ ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯಲ್ಲಿದ್ದು, ಶಾಸಕರ ನಿಧಿಯಿಂದ ಹಾಗೂ ಗ್ರಾ.ಪಂ.
ಅನುದಾನದಿಂದ ಅಭಿವೃದ್ಧಿ ಮಾಡಲಾಗಿದೆ. ತೊಡಿಕಾನ – ಪಟ್ಟಿ -ಭಾಗಮಂಡಲ ಸಂಪರ್ಕ ರಸ್ತೆ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ 5 ಕೋಟಿ ರೂ. ಬಿಡುಗಡೆಯಾಗಿದೆ. ಈ ರಸ್ತೆ ವನ್ಯಜೀವಿ ಸಂರಕ್ಷಿತ ವಲಯದಲ್ಲಿ ಬರುವ ಕಾರಣದಿಂದ ಅರಣ್ಯ ಇಲಾಖೆ ಬೀಗ ಜಡಿದು, ಪ್ರವಾಸಿಗರಿಗೆ ತಡೆಯೊಡ್ಡಿದೆ ಎಂದು ತಿಳಿದುಬಂದಿದೆ.

Advertisement

ಸ್ಥಳೀಯರಿಗೆ ಸಮಸ್ಯೆಯಿಲ್ಲ
ಮೇಲಧಿಕಾರಿಗಳ ಸೂಚನೆ ಮೇರೆಗೆ ನಾವು ಗೇಟ್‌ಗೆ ಬೀಗ ಜಡಿದಿದ್ದೇವೆ. ಸ್ಥಳೀಯರಿಗೆ ನಾವು ಯಾವುದೇ ಸಮಸ್ಯೆ
ಮಾಡುವುದಿಲ್ಲ.
– ಅಮೃತೇಶ್‌,
ಭಾಗಮಂಡಲ ಫಾರೆಸ್ಟರ್‌

ಷಡ್ಯಂತ್ರ
ಈ ರಸ್ತೆಗೆ ಬೀಗ ಜಡಿದ ಪರಿಣಾಮ ಅನೇಕ ಭಕ್ತರಿಗೆ ಸಮಸ್ಯೆಯಾಗಿದೆ. ಇದೊಂದು ಐತಿಹಾಸಿಕ ಸಂಬಂಧವುಳ್ಳ ರಸ್ತೆ.ಇದೊಂದು ಧಾರ್ಮಿಕ ಸಂಬಂಧವನ್ನು ಕಡಿತಗೊಳಿಸುವ ಷಡ್ಯಂತ್ರವಾಗಿದೆ. ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು.
– ಜಿತೇಂದ್ರ,
ತೊಡಿಕಾನ ಗ್ರಾಮಸ್ಥ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next