Advertisement

ದ.ಕ. ಜಿಲ್ಲೆಯಲ್ಲಿ ವಸತಿ ಯೋಜನೆಗಳ ಅನುಷ್ಠಾನ: ಬಾಕಿ 13.51 ಕೋ.ರೂ. ಶೀಘ್ರ ಬಿಡುಗಡೆ

12:33 AM Dec 06, 2019 | mahesh |

ಮಂಗಳೂರು: ವಿವಿಧ ವಸತಿ ಯೋಜನೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಬಾಕಿಯಿರುವ 13.51 ಕೋ.ರೂ.ಗಳನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಜಿಲ್ಲೆಯ ವಿವಿಧ ವಸತಿ ಯೋಜನೆಗಳ ಬಗ್ಗೆ ದ.ಕ. ಜಿ.ಪಂ. ಸಭಾಂಗಣದಲ್ಲಿ ಅವರು ಗುರುವಾರ ಪ್ರಗತಿ ಪರಿಶೀಲನೆ ನಡೆಸಿದರು. ಹಣ ಬಿಡುಗಡೆಗೆ ಬಾಕಿಯಿರುವ ಕುರಿತು ವಸತಿ ಸಚಿವರ ಗಮನ ಸೆಳೆಯಲಾಗಿದೆ. ಅಧಿಕಾರಿಗಳಿಂದ ಸಂಗ್ರಹಿಸಿರುವ ಮಾಹಿತಿಯನ್ನು ಸಚಿವರಿಗೆ ನೀಡಿ ಬಾಕಿ ಹಣವನ್ನು ಶೀಘ್ರ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ 2,995 ಮನೆಗಳು ಮಂಜೂರಾಗಿ ವಿವಿಧ ಹಂತದಲ್ಲಿವೆ. ಹಣ ಬಿಡುಗಡೆಯಾಗದೆ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ ಎಂದು ಜಿಪಂ ಸಿಇಒ ಡಾ| ಆರ್‌. ಸೆಲ್ವಮಣಿ ವಿವರಿಸಿದರು. ಬಂಟ್ವಾಳ ತಾಲೂಕಿನಲ್ಲಿ 2.60 ಕೋ.ರೂ., ಬೆಳ್ತಂಗಡಿಯಲ್ಲಿ 5.86 ಕೋ.ರೂ., ಮಂಗಳೂರಿನಲ್ಲಿ 1.56 ಕೋ.ರೂ., ಪುತ್ತೂರಿನಲ್ಲಿ 1.72 ಕೋ.ರೂ., ಸುಳ್ಯದಲ್ಲಿ 1.75 ಕೋ.ರೂ. ಹಣ ಬಿಡುಗಡೆಗೆ ಬಾಕಿ ಇದೆ. ಬಂಟ್ವಾಳದಲ್ಲಿ 528, ಬೆಳ್ತಂಗಡಿಯಲ್ಲಿ 1,135, ಮಂಗಳೂರಿನಲ್ಲಿ 459, ಪುತ್ತೂರಿನಲ್ಲಿ 643, ಸುಳ್ಯದಲ್ಲಿ 220 ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಹಣ ಬಿಡುಗಡೆಗೆ ಬಾಕಿಯಿದೆ. ಅಂಬೇಡ್ಕರ್‌ ವಸತಿ ಯೋಜನೆಯಡಿ 2015-16ರಿಂದ ಇದುವರೆಗೂ ಮಂಜೂರಾಗಿಲ್ಲ ಎಂದು ಅಧಿಕಾರಿಗಳು ವಿವರಿಸಿದರು.

2010-11ರಿಂದ 2017-18ರವರೆಗೆ ಒಟ್ಟು 14,818 ಮನೆಗಳು ಬ್ಲಾಕ್‌ ಆಗಿವೆ. ಪ್ರಸ್ತುತ 607 ಮನೆಗಳ ಮರು ಮಂಜೂ ರಾತಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಜಿ.ಪಂ.ನಿಂದ ಮಂಜೂರಾದರೆ ಪರಿಗಣಿಸುವುದಾಗಿ ರಾಜೀವ್‌ ಗಾಂಧಿ ವಸತಿ ನಿಗಮ ಯೋಜನೆಯ ಅಧಿಕಾರಿಗಳು ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.

ಕೆಲವು ಗ್ರಾ.ಪಂ.ಗಳಲ್ಲಿ ಮನೆ ನಿರ್ಮಿಸಲು ಯೋಗ್ಯವಲ್ಲದ ಜಾಗ ಗುರುತಿಸಲಾಗಿದೆ. ಜಾಗ ಸಮತಟ್ಟು ಮಾಡಲು ಹೆಚ್ಚು ಹಣ ಬೇಕಾಗುತ್ತದೆ. ಇದಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಬೇಕು ಎಂದು ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು ಆಗ್ರಹಿಸಿದರು.

Advertisement

ವಿವಿಧ ಸಮಸ್ಯೆಗಳನ್ನು ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿ.ಪಂ. ಸದಸ್ಯರಾದ ಎಂ.ಎಸ್‌. ಮಹಮ್ಮದ್‌. ಎಸ್‌.ಎನ್‌. ಮನ್ಮಥ, ವಿನೋದ್‌ ಕುಮಾರ್‌, ಧರಣೇಂದ್ರ ಕುಮಾರ್‌ ಸಚಿವರ ಗಮನಕ್ಕೆ ತಂದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಯೋಜನಾ ನಿರ್ದೇಶಕ ಮಧು ಉಪಸ್ಥಿತರಿದ್ದರು.

ಶೀಘ್ರ ಸಭೆ
ವಿವಿಧ ವಸತಿ ಯೋಜನೆಗಳ ಅನುಷ್ಠಾನ, ಪ್ರಗತಿ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲು ಶೀಘ್ರದಲ್ಲೇ ಸಭೆ ಕರೆಯಲಾಗುವುದು. ರಾಜೀವ್‌ ಗಾಂಧಿ ವಸತಿ ನಿಗಮದ ನಿರ್ದೇಶಕರೂ ಉಪಸ್ಥಿತರಿರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ತಿಳಿಸಿದರು.

ಸಾಮೂಹಿಕ ವಿವಾಹ ನೋಂದಣಿಗೆ ಮಾ. 27 ಕೊನೆಯ ದಿನ: ಕೋಟ
ಉಡುಪಿ: ದೇವಸ್ಥಾನಗಳಲ್ಲಿ ಎ. 26ರಂದು ನಡೆಯುವ ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಳ್ಳಲು ಮಾ. 27 ಕಡೆಯ ದಿನಾಂಕ. ನೊಂದಾಯಿಸಿಕೊಂಡ ವಧೂವರರ ವಿವರಗಳನ್ನು ಎ. 1ರಂದು ಪ್ರಕಟಿಸಲಾಗುವುದು. ಆಕ್ಷೇಪಣೆಗೆ ಎ. 6 ಕೊನೆಯ ದಿನ. ಎ. 11ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಸಾಮೂಹಿಕ ವಿವಾಹ ಕುರಿತು ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ವಿವರ ನೀಡಿದರು.

ಗಣ್ಯರು ಭಾಗಿ
ಎ. 26ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ರವಿಶಂಕರ್‌ ಗುರೂಜಿ, ಇನ್ಫೋಸಿಸ್‌ನ ಸುಧಾಮೂರ್ತಿ, ಪ್ರಮುಖ ವೀರಶೈವ ಮಠಾಧೀಶರು, ಒಕ್ಕಲಿಗ ಗುರುಗಳು ಭಾಗವಹಿಸಲಿದ್ದಾರೆ ಎಂದು ಸಚಿವ ಪೂಜಾರಿ ತಿಳಿಸಿದರು.

ಟೋಲ್‌ಫ್ರೀ ಸಂಖ್ಯೆ
ಸಾಮೂಹಿಕ ವಿವಾಹದ ಬಗ್ಗೆ ಶೀಘ್ರದಲ್ಲಿಯೇ ಟೋಲ್‌ ಫ್ರೀ ಸಂಖ್ಯೆಯನ್ನು ಆರಂಭಿಸಲಾಗುವುದು. ಸಾರ್ವಜನಿಕರು ಕರೆ ಮಾಡಿ ವಿವಾಹಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದರು. ಶಾಸಕ ರಘುಪತಿ ಭಟ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next