Advertisement

ದ.ಕ. ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ: ಸಚಿವ ಕೋಟ

01:24 AM Mar 15, 2020 | Sriram |

ಮಂಗಳೂರು: ಕೊರೊನಾ ವೈರಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಟಲು ಸ್ರಾವ ಪರೀಕ್ಷೆಗೆ ಜಿಲ್ಲೆಯಲ್ಲಿ ವಿಶೇಷ ಲ್ಯಾಬ್‌ ತೆರೆಯುವಂತೆ ಮುಖ್ಯಮಂತ್ರಿಯವರಲ್ಲಿ ಒತ್ತಾಯ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಜಿಲ್ಲೆಯಲ್ಲಿ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
Advertisement

ಜ್ವರ, ತಲೆನೋವು, ಶೀತ, ಕೆಮ್ಮು, ಕಫ ಬಾಧಿತ ವ್ಯಕ್ತಿಗಳಲ್ಲಿ ಕೊರೊನಾ ಇರುವುದಿಲ್ಲ. ಕೊರೊನಾ ಪೀಡಿತ ದೇಶಗಳಿಂದ ಮಂಗಳೂರಿಗೆ ಬಂದವರಲ್ಲಿ ಈ ಯಾವುದಾದರೂ ಲಕ್ಷಣ ಕಂಡು ಬಂದು ಅಗತ್ಯವಿದ್ದಲ್ಲಿ ಅವರ ಗಂಟಲು ಸ್ರಾವವನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಪ್ರಸ್ತುತ ಹಾಸನ, ಬೆಂಗಳೂರು ಸೇರಿದಂತೆ ನಾಲ್ಕು ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ. ಮಂಗಳೂರಿನಲ್ಲಿ ಆರಂಭಿಸುವಂತೆ ಈಗಾಗಲೇ ಜಿಲ್ಲಾಡಳಿತ ಮನವಿ ಮಾಡಿದ್ದು, ನಾನೂ ಒತ್ತಾಯಿಸುವೆ ಎಂದರು.

7 ವರದಿ ನೆಗೆಟಿವ್‌
ವೆನಾÉಕ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ಮಾತನಾಡಿ, ವೆನಾÉಕ್‌ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಐಸೋಲೇಶನ್‌ ವಾರ್ಡ್‌, 6 ಹಾಸಿಗೆ ಗಳ ಚಿಕಿತ್ಸಾ ಕೇಂದ್ರ ಮತ್ತು 3 ಹಾಸಿಗೆಗಳ ಕ್ರಿಟಿಕಲ್‌ ಕೇರ್‌ ಕೇಂದ್ರವನ್ನು ತೆರೆಯಲಾಗಿದೆ. ಪರೀಕ್ಷೆಗೆ ಕಳುಹಿಸಿದ 10 ಮಂದಿಯ ಗಂಟಲು ಸ್ರಾವದ ಮಾದರಿಯಲ್ಲಿ 7 ನೆಗೆಟಿವ್‌ ಬಂದಿದ್ದು, 4ರ ವರದಿ ಬರಬೇಕಿದೆ. ಗಂಟಲು ಸ್ರಾವ ಮಾದರಿಯನ್ನು ಬೆಂಗಳೂರು ವೈದ್ಯಕೀಯ ಕಾಲೇಜಿನ ಬದಲಾಗಿ ಹಾಸನದ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ ಎಂದರು.

ಇಲಾಖೆಯಿಂದ ನಿರಂತರ ನಿಗಾ
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಮಾತನಾಡಿ, ವಿಮಾನ ನಿಲ್ದಾಣದಲ್ಲಿ ಈಗಾಗಲೇ ತಪಾಸಣೆ ನಡೆಯುತ್ತಿದೆ. ರೈಲ್ವೇ ಸ್ಟೇಷನ್‌ನಲ್ಲಿ ಸಹಾಯ ಕೇಂದ್ರ ತೆರೆಯಲಾಗಿದೆ. ಕೊರೊನಾ ಪೀಡಿತ 7 ಹೈ ರಿಸ್ಕ್ ದೇಶ ಸಹಿತ ವಿದೇಶಗ ಳಿಂದ ಬಂದ ಎಲ್ಲರನ್ನು ತಪಾಸಣೆಗೆ ಒಳಪಡಿಸ ಲಾಗುತ್ತಿದೆ. ಯಾವುದೇ ಲಕ್ಷಣ ಕಂಡು ಬಾರದಿದ್ದರೂ 14 ದಿನ ಮನೆಯಲ್ಲೇ ನಿಗಾದಲ್ಲಿ ಇರುವಂತೆ ಸೂಚಿಸಲಾಗುತ್ತದೆ. ಒಂದು ವೇಳೆ ಲಕ್ಷಣ ಪತ್ತೆಯಾದಲ್ಲಿ ವಿಮಾನ ನಿಲ್ದಾಣದಲ್ಲಿರುವ ಕೋವಿಡ್‌-19 ಸಹಾಯ ಕೇಂದ್ರದಲ್ಲಿ ಕೌನ್ಸೆಲಿಂಗ್‌ ನಡೆಸಿ ಗಂಟಲು ಸ್ರಾವ ಪಡೆದು ಐಸೋಲೇಶನ್‌ ವಾರ್ಡ್‌ ಇರುವ ಅವರು ಬಯಸಿದ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಪರೀಕ್ಷಾವರದಿ ಬಂದ ಬಳಿಕ ನೆಗೆಟಿವ್‌ ಆಗಿದ್ದರೆ 2 ದಿನಗಳಲ್ಲಿ ಮನೆಗೆ ಕಳುಹಿಸಿ 14 ದಿನ ನಿಗಾದಲ್ಲಿ ಇರಿಸಲಾಗುತ್ತದೆ. ಈ ಸಮಯದಲ್ಲಿ ಸುಧಾರಣೆ ಕಂಡು ಬಾರದಿದ್ದಲ್ಲಿ 28 ದಿನ ನಿಗಾದಲ್ಲಿರಬೇಕು. ಈ ಎಲ್ಲವನ್ನೂ ಆರೋಗ್ಯ ಇಲಾಖೆ ನೋಡಿಕೊಳ್ಳಲಿದೆ ಎಂದರು.

ಪ್ರತಿದಿನ ಮಾಹಿತಿ ತರಿಸಿಕೊಳ್ಳಿ
ಎಲ್ಲ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸಂಬಂಧಿ ತಪಾಸಣೆ ನಡೆದಲ್ಲಿ ನಿತ್ಯವೂ ಆರೋಗ್ಯ ಇಲಾಖೆ ಮಾಹಿತಿ ತರಿಸಿಕೊಳ್ಳಬೇಕು. ರಾತ್ರಿ 8ರೊಳಗೆ ಅದನ್ನು ಜಿಲ್ಲಾಧಿಕಾ ರಿಯವರಿಗೆ ನೀಡಬೇಕೆಂದು ಸಂಸದ ನಳಿನ್‌ ಕುಮಾರ್‌ ಸೂಚಿಸಿದರು.

Advertisement

ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕಡಿಮೆ ಇದ್ದಲ್ಲಿ ಆಯಾ ಗ್ರಾಮಗಳನ್ನು ಅಗತ್ಯ ಬಿದ್ದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದತ್ತು ನೀಡಿ ನಿಗಾ ವಹಿಸಲು ಸೂಚಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

46 ಡೆಂಗ್ಯೂ, 2 ಇಲಿಜ್ವರ
ಡೆಂಗ್ಯೂ, ಇಲಿ ಜ್ವರದಂತಹ ಸಾಂಕ್ರಾಮಿಕ ರೋಗಗಳು ಜಿಲ್ಲೆಯಲ್ಲಿ ನಿಯಂತ್ರಣದಲ್ಲಿವೆ. ಜನವರಿಯಿಂದ ಇಲ್ಲಿಯವರೆಗೆ 46 ಡೆಂಗ್ಯೂ, 2 ಇಲಿ ಜ್ವರ ಪ್ರಕರಣ ಪತ್ತೆಯಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್‌ ಮಾಹಿತಿ ನೀಡಿದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಡಿ. ವೇದವ್ಯಾಸ ಕಾಮತ್‌, ರಾಜೇಶ್‌ ನಾೖಕ್‌, ಎಂಎಲ್‌ಸಿ ಬಿ.ಎಂ. ಫಾರೂಕ್‌, ಮೇಯರ್‌ ದಿವಾಕರ ಪಾಂಡೇಶ್ವರ, ಅಪರ ಜಿಲ್ಲಾಧಿಕಾರಿ ರೂಪಾ ಎಂ. ಜೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌, ಜಿಪಂ ಸಿಇಒ ಡಾ| ಆರ್‌. ಸೆಲ್ವಮಣಿ ಉಪಸ್ಥಿತರಿದ್ದರು.

ವಿನಾಕಾರಣ ಭಯ ಬೇಡ
ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಜನರು ವಿನಾಕಾರಣ ಭಯ ಪಡಬಾರದು. ಆದರೆ ಎಚ್ಚರಿಕೆ ವಹಿಸಬೇಕು. ಆಗಾಗ ಕೈ ತೊಳೆಯಬೇಕು. ಧಾರ್ಮಿಕ ಕಾರ್ಯಕ್ರಮ, ಶುಭ ಸಮಾರಂಭಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.

ತಂಡ ರಚಿಸಿ ಕಾರ್ಯೋನ್ಮುಖರಾಗಿ
ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ದುಪ್ಪಟ್ಟು ದರದಲ್ಲಿ ಮಾರುವ ವ್ಯಾಪಾರಿಗಳ ವಿರುದ್ಧ ಕ್ರಮ ಜರಗಿಸಬೇಕು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಜಿಲ್ಲಾ ಇಲಾಖೆಗಳಿಗೆ ಸೂಚಿಸಿದೆ.

ರಾಜ್ಯದಲ್ಲಿ ಕೋವಿಡ್‌-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾ ಮತ್ತು ವಲಯಗಳ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಗಳು ಜಂಟಿಯಾಗಿ ತಂಡ ರಚಿಸಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ತನಿಖೆ ನಡೆಸಬೇಕು. ಸಾರ್ವಜನಿಕರಿಗೆ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆ-1955, 2020 ಮತ್ತು ಪಟ್ಟಣ ಸಾಮಗ್ರಿಗಳ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಜನಸಂಚಾರ ವಿರಳ
ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಸರಕಾರ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರದಿಂದ ಒಂದು ವಾರ ಬಂದ್‌ ಘೋಷಿಸಿರುವುದರಿಂದ ಮಂಗಳೂರಿನಲ್ಲಿ ಮಾಲ್‌ಗ‌ಳು, ಚಿತ್ರಮಂದಿರಗಳು ಶನಿವಾರ ಕಾರ್ಯಾಚರಿಸಲಿಲ್ಲ. ನಗರದಲ್ಲಿ ಜನ ಹಾಗೂ ವಾಹನ ಸಂಚಾರವೂ ವಿರಳವಾಗಿತ್ತು. ಧಾರ್ಮಿಕ ಕ್ಷೇತ್ರಗಳು, ಬೀಚ್‌ ಸೇರಿದಂತೆ ಪ್ರವಾಸಿ ತಾಣಗಳಲ್ಲೂ ಜನ ಸಂಚಾರ ಕಡಿಮೆ ಇತ್ತು. ನಗರದಿಂದ ವಿವಿಧ ಪ್ರದೇಶಗಳಿಗೆ ಸಂಚರಿಸುವ ಸಿಟಿ ಬಸ್‌ಗಳಲ್ಲೂ ಪ್ರಯಾಣಿಕರು ಸಾಕಷ್ಟಿರಲಿಲ್ಲ. ಪಣಂಬೂರು ಬೀಚ್‌ ಬಳಿ ಬೀದಿಬದಿ ವ್ಯಾಪಾರಿಗಳನ್ನು ಪಾಲಿಕೆಯು ತೆರವುಗೊಳಿಸಿತು.

ಕಾರ್ಯಕ್ರಮ ರದ್ದು
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಜಾತ್ರೆ ಸಮಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ನಡೆಸುವುದಾಗಿ ಆಡಳಿತ ಮಂಡಳಿ ತಿಳಿಸಿದೆ.

ಬೀದಿ ಬದಿ ವ್ಯಾಪಾರ ಗಾಡಿ ತೆರವು
ಕೊರೊನಾ ರೋಗವು ಸಾಂಕ್ರಾಮಿಕ ರೋಗ ಎಂದು ರಾಜ್ಯ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಸ್ವತ್ಛತೆಯ ಹಿತದೃಷ್ಟಿಯಿಂದ ಬೀದಿ ಬದಿ ತಿಂಡಿ, ತಿನಿಸು ವ್ಯಾಪಾರ ಗಾಡಿಗಳನ್ನು ಶನಿವಾರದಂದು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.

ರೈಲು ನಿಲ್ದಾಣದಲ್ಲಿ ಜನಜಂಗುಳಿ
ರಜೆ ಹಿನ್ನೆಲೆಯಲ್ಲಿ ಅನ್ಯ ರಾಜ್ಯ ಮತ್ತು ಜಿಲ್ಲೆಯ ಇತರ ಭಾಗಗಳ ವಿದ್ಯಾರ್ಥಿಗಳು ಊರಿಗೆ ತೆರಳಿದ ಹಿನ್ನೆಲೆಯಲ್ಲಿ ರೈಲು ಮತ್ತು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಮಧ್ಯಾಹ್ನದ ವೇಳೆಗೆ ಜನಜಂಗುಳಿಯಿತ್ತು. ಬಹುತೇಕರು ಮಾಸ್ಕ್ ಧರಿಸಿದ್ದ ದೃಶ್ಯ ಕಂಡು ಬಂತು. ನಗರದಲ್ಲಿ ಯಾವುದೇ, ಕ್ರೀಡಾಕೂಟಗಳು ನಡೆಯಬಾರದೆಂಬ ಆದೇಶವಿದ್ದರೂ ನೆಹರೂ ಮೈದಾನದಲ್ಲಿ ಮಧ್ಯಾಹ್ನದವರೆಗೆ ಕೋಸ್ಟಲ್‌ವುಡ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾಟ ನಡೆಯಿತು.

ದಿನಗೂಲಿ ನೌಕರರು ಕಂಗಾಲು
ಮಂಗಳೂರು, ಮಾ. 14: ಕೊರೊನಾ ಭೀತಿಯಿಂದಾಗಿ ಸರಕಾರ ಅನಿವಾರ್ಯವಾಗಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ದಿನಗೂಲಿ ನೌಕರರು ಮತ್ತು ಬೀದಿಬದಿ ವ್ಯಾಪಾರಿಗಳು ಕಂಗಾಲಾಗಿದ್ದು, ಕೆಲವರಿಗೆ ಒಪ್ಪೊತ್ತಿನ ಊಟಕ್ಕೂ ತತ್ವಾರ ಬಂದಿದೆ. ಈ ರೀತಿ ಕಷ್ಟದಲ್ಲಿ ಇರುವವರಿಗೆ ಉಳ್ಳವರು ಮತ್ತು ಸ್ಥಿತಿವಂತರು ಸಹಾಯ ಮಾಡಬೇಕು. ಜನ ಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಕೂಡ ಅವರ ನೆರವಿಗೆ ಬರ ಬೇಕಾಗಿದೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ಜಗದೀಶ್‌ ಶೇಣವ ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next